ಕುಂದಾನಗರಿ ಬೆಳಗಾವಿಯಲ್ಲಿ ಮಹಿಳೆಯರ ಆತ್ಮವಿಶ್ವಾಸ ಮತ್ತು ಕೌಶಲ್ಯಕ್ಕೆ ಸಾಕ್ಷಿಯಾಗುವಂತಹ ಅದ್ಭುತ ಕಾರ್ಯಕ್ರಮವೊಂದು ಯಶಸ್ವಿಯಾಗಿ ಜರುಗಿದೆ. ಏಂಜೆಲ್ ಫೌಂಡೇಶನ್ ಮತ್ತು ಕೆ.ಜಿ. ಕ್ರಿಯೇಷನ್ ಜಂಟಿಯಾಗಿ ಆಯೋಜಿಸಿದ್ದ ‘ಹೋಮ್ ಮಿನಿಸ್ಟರ್’ ಹಾಗೂ ‘ಫ್ಯಾಶನ್ ಶೋ’ ಸ್ಪರ್ಧೆಗಳಲ್ಲಿ ಬೆಳಗಾವಿಯ ನಾರಿಯರು ಅಬ್ಬರಿಸಿದ್ದಾರೆ.

ಬೆಳಗಾವಿಯ ಖಾಸಬಾಗ್‌ನ ಜಯಶಂಕರ ಭವನದಲ್ಲಿ ಏಂಜೆಲ್ ಫೌಂಡೇಶನ್ ಮತ್ತು ಕೆ.ಜಿ. ಕ್ರಿಯೇಷನ್ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ ‘ಹೋಮ್ ಮಿನಿಸ್ಟರ್’ ಮತ್ತು ‘ಫ್ಯಾಶನ್ ಶೋ’ ಕಾರ್ಯಕ್ರಮಕ್ಕೆ ಮಹಿಳೆಯರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಯಿತು. ಮಾಜಿ ಶಾಸಕ ಸಂಜಯ್ ಪಾಟೀಲ್, ಮೀನಾ ಬೆನಕೆ, ಲೀನಾ ಟೋಪಣ್ಣವರ್ ಸೇರಿದಂತೆ ಪ್ರಮುಖ ಗಣ್ಯರು ಶ್ರೀ ಗಣೇಶ ಪೂಜೆ ಹಾಗೂ ದೀಪ ಬೆಳಗಿಸುವ ಮೂಲಕ


ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಸಂಜಯ್ ಪಾಟೀಲ್ ಅವರು, ಫೌಂಡೇಶನ್‌ನ ಸಾಮಾಜಿಕ ಕಾರ್ಯಗಳನ್ನು ಶ್ಲಾಘಿಸುತ್ತಾ, ಇಂತಹ ವೇದಿಕೆಗಳು ಮಹಿಳೆಯರ ಕೌಶಲ್ಯ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಹಕಾರಿಯಾಗಿವೆ ಎಂದು ಪ್ರಶಂಸಿಸಿದರು. ವಿವಿಧ ಸಾಂಸ್ಕೃತಿಕ ಪ್ರದರ್ಶನಗಳು ಕಾರ್ಯಕ್ರಮದ ರಂಗನ್ನು ಇಮ್ಮಡಿಗೊಳಿಸಿದವು.

ಮಹಿಳೆಯರ ಅತ್ಯುತ್ಸಾಹದ ನಡುವೆ ನಡೆದ ‘ಹೋಮ್ ಮಿನಿಸ್ಟರ್’ ಸ್ಪರ್ಧೆಯಲ್ಲಿ ಸ್ವಾತಿ ಓಂಕಾರ ಕುರಣೆ ಪ್ರಥಮ ಸ್ಥಾನ ಗಳಿಸಿದರೆ, ಪೂಜಾ ಮುದ್ಗೇಕರ್ ದ್ವಿತೀಯ ಹಾಗೂ ತೃಪ್ತಿ ಲಿಂಗಡೆ ತೃತೀಯ ಸ್ಥಾನ ಪಡೆದುಕೊಂಡರು. ಇತ್ತ ಸಾರ್ವಜನಿಕರ ಕಣ್ಮನ ಸೆಳೆದ ‘ಫ್ಯಾಶನ್ ಶೋ’ ಸ್ಪರ್ಧೆಯಲ್ಲಿ ಸ್ನೇಹಲ್ ಮಾವಳಂಕರ್ ಪ್ರಥಮ, ಸೋನಿಯಾ ಆಳವೆ ದ್ವಿತೀಯ ಮತ್ತು ಪುಷ್ಪಾ ಜಾಧವ್ ತೃತೀಯ ಸ್ಥಾನ ಮುಡಿಗೇರಿಸಿಕೊಂಡರು. ವಿಜೇತರಿಗೆ ಹಾಗೂ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಗಣ್ಯರ ಹಸ್ತದಿಂದ ಬಹುಮಾನ ಮತ್ತು ಪ್ರಮಾಣಪತ್ರಗಳನ್ನು ವಿತರಿಸಿ ಗೌರವಿಸಲಾಯಿತು. ಒಟ್ಟಾರೆ ಮಹಿಳೆಯರ ವ್ಯಕ್ತಿತ್ವ ವಿಕಸನಕ್ಕೆ ಸಾಕ್ಷಿಯಾದ ಈ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು

