Bagalkot

ಇಲಕಲ್‌ನಲ್ಲಿ ನೀರು ಕೇಳಿದ ಜನರಿಗೆ ‘ಕೇಸ್ ಭಾಗ್ಯ’! ನಗರಸಭೆ ಮುತ್ತಿಗೆ ಹಾಕಿದ್ದ 9 ನಿವಾಸಿಗಳ ಮೇಲೆ FIR

Share

“ಕುಡಿಯುವ ನೀರಿನ ಸಮಸ್ಯೆಯಾದರೆ ಅಧಿಕಾರಿಗಳೇ ನೇರ ಹೊಣೆ” ಎಂದು ಒಂದು ಕಡೆ ಸರ್ಕಾರ ಹೇಳುತ್ತಿದ್ದರೆ, ಮತ್ತೊಂದೆಡೆ ಬಾಗಲಕೋಟೆ ಜಿಲ್ಲೆಯ ಇಲಕಲ್‌ನಲ್ಲಿ ನೀರು ಕೇಳಿದ ಜನಸಾಮಾನ್ಯರ ಮೇಲೆಯೇ ಅಧಿಕಾರಿಗಳು ಎಫ್‌ಐಆರ್ ದಾಖಲಿಸಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಕಳೆದ ಜುಲೈ 9 ರಂದು ಕುಡಿಯುವ ನೀರಿಗಾಗಿ ಇಲಕಲ್ ನಗರಸಭೆಗೆ ಮುತ್ತಿಗೆ ಹಾಕಿದ್ದ ಮಹಿಳೆಯರು ಸೇರಿದಂತೆ 9 ಜನರ ವಿರುದ್ಧ ಇಲಕಲ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಇಲಕಲ್ ನಗರದ ಲಕ್ಷ್ಮೀನಗರ ನಿವಾಸಿಗಳು ಕಳೆದ ಮೂರು ವರ್ಷಗಳಿಂದ ಕುಡಿಯುವ ನೀರಿಗಾಗಿ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಅವಧಿಯಲ್ಲಿ ನೀರಿಗಾಗಿ ಬರೋಬ್ಬರಿ 50ಕ್ಕೂ ಹೆಚ್ಚು ಬಾರಿ ಪ್ರತಿಭಟನೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳ ನಿರಂತರ ನಿರ್ಲಕ್ಷ್ಯ ಹಾಗೂ ಉಡಾಫೆ ಧೋರಣೆಯಿಂದ ರೋಸಿ ಹೋಗಿದ್ದ ನಿವಾಸಿಗಳು, ಕಳೆದ ಜುಲೈ 9 ರಂದು ನಗರಸಭೆಗೆ ಮುತ್ತಿಗೆ ಹಾಕಿದ್ದರು. ಈ ವೇಳೆ ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸದ ಕಾರಣ ಆಕ್ರೋಶಗೊಂಡು ನಗರಸಭೆಯ ಕೊಠಡಿಗಳಿಗೆ ಬೀಗ ಜಡಿದು ಆಕ್ರೋಶ ಹೊರಹಾಕಿದ್ದರು. ಆದರೆ, ಇದನ್ನೇ ನೆಪವಾಗಿಸಿಕೊಂಡಿರುವ ನಗರಸಭೆಯ ಅಧಿಕಾರಿಗಳು, ಪ್ರತಿಭಟನಾಕಾರರು ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ಇಲಕಲ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಅಧಿಕಾರಿಗಳ ದೂರಿನ ಅನ್ವಯ ಪೊಲೀಸರು ಮಹಿಳೆಯರು ಸೇರಿದಂತೆ ಒಟ್ಟು 9 ಜನರ ಮೇಲೆ ಎಫ್.ಐ.ಆರ್ ದಾಖಲಿಸಿದ್ದಾರೆ. ನಿರಂತರ ಪ್ರತಿಭಟನೆಗಳಿಂದ ಬೇಸತ್ತಿದ್ದ ಅಧಿಕಾರಿಗಳು ಸಾರ್ವಜನಿಕರ ಧ್ವನಿಯನ್ನು ಅಡಗಿಸಲು ಈ ತಂತ್ರ ಹೂಡಿದ್ದಾರಾ ಎನ್ನುವ ಅನುಮಾನ ವ್ಯಕ್ತವಾಗಿದೆ. “ಮೂಲಭೂತ ಸೌಕರ್ಯವಾದ ಕುಡಿಯುವ ನೀರು ಕೇಳಿದ್ದೇ ನಾವು ಮಾಡಿದ ತಪ್ಪಾಯ್ತಾ?” ಎಂದು ಇಲಕಲ್ ಜನತೆ ಈಗ ಆಳರಸರನ್ನು ಪ್ರಶ್ನಿಸುತ್ತಿದ್ದಾರೆ. ಇತ್ತ ಸಾರ್ವಜನಿಕರ ಮೇಲೆ ಕೇಸ್ ದಾಖಲಿಸಿರುವ ಅಧಿಕಾರಿಗಳ ಕ್ರಮವನ್ನು ಖಂಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದು, “ನೀರು ಕೇಳಿದರೆ ಕೇಸ್ ಭಾಗ್ಯ ಕೊಡುವ ಸರ್ಕಾರ ನಮಗೆ ಬೇಕೇ?” ಎಂದು ಇಲಕಲ್ ನಿವಾಸಿಗಳು ಸರ್ಕಾರದ ವಿರುದ್ಧ ಚಾಟಿ ಬೀಸಿದ್ದಾರೆ.

Tags:

error: Content is protected !!