BELAGAVI

ರೈತರ ಜಮೀನಿನ ‘ಉತಾರ’ ಸಮಸ್ಯೆಗೆ ಮುಕ್ತಿ ಸಿಗೋದು ಎಂದು?; ಬೆಳಗಾವಿ ಡಿಸಿ ಕಚೇರಿ ಎದುರು ಅನ್ನದಾತರ ಹಕ್ಕೊತ್ತಾಯ!

Share

ಬೆಳಗಾವಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಎದುರು ಇಂದು ರಾಜ್ಯ ರೈತ ಸಂಘದ ನೇತೃತ್ವದಲ್ಲಿ ರೈತರು ಬೃಹತ್ ಪ್ರತಿಭಟನೆ ನಡೆಸಿದರು. ಜಮೀನಿನ ಉತಾರ ನೀಡುವಲ್ಲಿ ತಹಶೀಲ್ದಾರ್ ಮಾಡುತ್ತಿರುವ ನಿಯಮ ಬಾಹಿರ ವಸೂಲಾತಿ ಹಾಗೂ ಪಂಚಾಯಿತಿಗಳಲ್ಲಿ ಕಂಪ್ಯೂಟರ್ ಉತಾರ ನೀಡಲು ಸತಾಯಿಸುತ್ತಿರುವ ಅಧಿಕಾರಿಗಳ ನೀತಿಯನ್ನು ಖಂಡಿಸಿ ರೈತರು ಆಕ್ರೋಶ ವ್ಯಕ್ತಪಡಿಸಿದರು.

ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಇಂದು ರಾಜ್ಯ ರೈತ ಸಂಘದ ವತಿಯಿಂದ ಬೃಹತ್ ಹಕ್ಕೊತ್ತಾಯ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ರೈತರ ಎಲ್ಲಾ ಹೊಲಗಳನ್ನು ಒಟ್ಟುಗೂಡಿಸಿರುವುದರಿಂದ, ಒಂದೇ ಒಂದು ಉತಾರ (RTC) ಪಡೆಯಬೇಕಾದರೂ ಒಂದೇ ಸರ್ವೆ ನಂಬರ್ ವ್ಯಾಪ್ತಿಗೆ ಬರುವ ಸುಮಾರು 30 ರಿಂದ 40 ಉತಾರಗಳಿಗೆ ಎಲ್ಲಾ ರೈತರು ಅನಗತ್ಯವಾಗಿ ಹಣ ಪಾವತಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಹಿಂದೆ ಜಿಲ್ಲಾಧಿಕಾರಿಗಳು ಉತಾರಗಳನ್ನು ಪ್ರತ್ಯೇಕ (ಸಪರೇಟ್) ಮಾಡಿಕೊಡುವುದಾಗಿ ಭರವಸೆ ನೀಡಿದ್ದರು. ಆದರೆ ಈಗ ಸ್ಥಳೀಯ ತಹಶೀಲ್ದಾರರು ಪ್ರತಿ ಎಕರೆಗೆ 1,000 ರೂಪಾಯಿ ಹಣ ಕಟ್ಟುವಂತೆ ರೈತರಿಗೆ ಒತ್ತಾಯಿಸುತ್ತಿದ್ದಾರೆ. ಅಧಿಕಾರಿಗಳು ಮಾಡಿದ ತಪ್ಪಿಗೆ ಬಡ ರೈತರು ಯಾಕೆ ದಂಡ ಹಾಗೂ ದುಡ್ಡು ಕಟ್ಟಬೇಕು? ಸರ್ಕಾರಕ್ಕೆ ಬೇರೆ ಆದಾಯದ ಮೂಲಗಳಿದ್ದರೆ ನೋಡಿಕೊಳ್ಳಲಿ, ದಯವಿಟ್ಟು ರೈತರನ್ನು ಸುಲಿಗೆ ಮಾಡಬೇಡಿ ಎಂದು ಪ್ರತಿಭಟನಾಕಾರರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಪ್ರತಿಭಟನೆಯಲ್ಲಿ ಮಾತನಾಡಿದ ರಾಜ್ಯ ರೈತ ಸಂಘದ ಅಧ್ಯಕ್ಷರಾದ ಬಸವರಾಜ್ ಮೋಕಾಶಿ ಅವರು, ಗ್ರಾಮೀಣ ಭಾಗದಲ್ಲಿ ಪಂಚಾಯಿತಿಯವರು ಬಡವರಿಗೆ ಕಂಪ್ಯೂಟರ್ ಉತಾರಗಳನ್ನು ನೀಡುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದರು. ಕಳೆದ 30 ರಿಂದ 40 ವರ್ಷಗಳ ಹಿಂದೆಯೇ ಸರ್ವೆ ನಂಬರ್‌ ಜಾಗದಲ್ಲಿ ಮನೆಗಳನ್ನು ಕಟ್ಟಿಕೊಂಡು ವಾಸಿಸುತ್ತಿರುವ ಬಡ ರೈತರಿಗೆ, ಈಗಿನ ಅಧಿಕಾರಿಗಳು ಮೂಲ ಮಾಲೀಕರ ಕಡೆಯಿಂದ ಸಬ್ ರಿಜಿಸ್ಟ್ರಾರ್ ಆಫೀಸ್‌ನಲ್ಲಿ ಖರೀದಿ ಪತ್ರ ಮಾಡಿಸಿಕೊಂಡು ಬರುವಂತೆ ಸತಾಯಿಸುತ್ತಿದ್ದಾರೆ. ಆದರೆ ಆ ಮೂಲ ಮಾಲೀಕರು ಈಗಾಗಲೇ ಮೃತಪಟ್ಟಿದ್ದು, ಅವರ ಮಕ್ಕಳು ಸಹಿ ಮಾಡಲು ಭಾರಿ ಹಣ ಬೇಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮನೆ ಕಟ್ಟಿಕೊಂಡಿರುವ ಬಡವರು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದ ಅವರು, ರೈತರ ಸುಲಿಗೆ ನಿಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗಿಯಾಗಿದ್ಧರು.

Tags:

error: Content is protected !!