ಬಾಗಲಕೋಟೆ ಬಿಟಿಡಿಎ ಕಚೇರಿಯಲ್ಲಿ ಇಂದು ಅಭೂತಪೂರ್ವ ಹೈಡ್ರಾಮಾ ನಡೆದಿದೆ. ಕಳೆದ 20 ವರ್ಷಗಳಿಂದ ಭೂಸ್ವಾಧೀನ ಪರಿಹಾರ ಸಿಗದೆ ಮನನೊಂದಿದ್ದ ರೈತರೊಬ್ಬರು, ಶಾಸಕರ ಸಮ್ಮುಖದಲ್ಲೇ ಅಧಿಕಾರಿಯೊಬ್ಬರಿಗೆ ಚಪ್ಪಲಿಯಿಂದ ಹೊಡೆದ ಘಟನೆ ತೀವ್ರ ಸಂಚಲನ ಮೂಡಿಸಿದೆ.

ಬಾಗಲಕೋಟೆ ನಗರದ ಬಿಟಿಡಿಎ ಕಚೇರಿಯಲ್ಲಿ ಶಾಸಕ ಉಮೇಶ ಮೇಟಿ ನೇತೃತ್ವದಲ್ಲಿ ಹಕ್ಕುಪತ್ರ ವಿತರಣೆ ಕಾರ್ಯಕ್ರಮ ನಡೆಯುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಕಾರ್ಯಕ್ರಮದ ವೇಳೆ ವಿವಿಧ ಬೇಡಿಕೆಗಳಿಗಾಗಿ ದಲಿತಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ, ಕಳೆದ 20 ವರ್ಷಗಳಿಂದ ತಮ್ಮ ಭೂಸ್ವಾಧೀನ ಪ್ರಕರಣದ ಪರಿಹಾರಕ್ಕಾಗಿ ಕಚೇರಿ ಅಲೆಯುತ್ತಿದ್ದ ರೈತ ಬಸವರಾಜ್ ದೊಡಮನಿ ಎಂಬುವವರು ತೀವ್ರ ರೊಚ್ಚಿಗೆದ್ದಿದ್ದಾರೆ. ಎರಡು ದಶಕಗಳ ಅಲೆಯಾಟದ ಬಳಿಕವೂ ತಮಗೆ ನ್ಯಾಯ ಸಿಗದ ಹಿನ್ನೆಲೆಯಲ್ಲಿ ತೀವ್ರ ಆಕ್ರೋಶಗೊಂಡ ರೈತ, ಎಲ್ಲರ ಸಮ್ಮುಖದಲ್ಲೇ ಬಿಟಿಡಿಎ ಕಚೇರಿಯ ಕೇಸ್ ವರ್ಕರ್ ಅಂಕದ ಅವರಿಗೆ ಚಪ್ಪಲಿಯಿಂದ ಹೊಡೆದಿದ್ದಾರೆ. ಈ ಅನಿರೀಕ್ಷಿತ ದಾಳಿಯಿಂದ ಕಚೇರಿ ಆವರಣದಲ್ಲಿ ಕೆಲಕಾಲ ತೀವ್ರ ಉದ್ವಿಗ್ನತೆ ಹಾಗೂ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.

