ಬಾಗಲಕೋಟೆ ಜಿಲ್ಲೆಯಲ್ಲಿ ಸಕಾಲಕ್ಕೆ ಮುಂಗಾರು ಮಳೆ ಪ್ರವೇಶಿಸಿರುವುದರಿಂದ ಅನ್ನದಾತನ ಮುಖದಲ್ಲಿ ಸಂತಸದ ರೇಖೆಗಳು ಮೂಡಿವೆ. ಕೃಷಿ ಚಟುವಟಿಕೆಗಳು ಚುರುಕುಗೊಂಡಿದ್ದು, ಜಿಲ್ಲೆಯಾದ್ಯಂತ ರೈತರು ಬಿತ್ತನೆ ಕಾರ್ಯಕ್ಕೆ ಬೇಕಾದ ರಸಗೊಬ್ಬರ ಖರೀದಿ ಹಾಗೂ ಭೂಮಿ ಸಿದ್ಧಪಡಿಸಿಕೊಳ್ಳುವ ಗಡಿಬಿಡಿಯಲ್ಲಿ ಬ್ಯುಸಿಯಾಗಿದ್ದಾರೆ.

ಪ್ರಸಕ್ತ ವರ್ಷ ಬಾಗಲಕೋಟೆ ಜಿಲ್ಲೆಯಲ್ಲಿ ಒಟ್ಟು 3 ಲಕ್ಷದ 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಬಿತ್ತನೆಯ ಗುರಿಯನ್ನು ಹೊಂದಲಾಗಿದೆ. ಕಳೆದ ವರ್ಷ 3 ಲಕ್ಷದ 60 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಜಿಲ್ಲೆಯಲ್ಲಿ ಪ್ರಮುಖವಾಗಿ ಕಬ್ಬು, ಮೆಕ್ಕೆಜೋಳ, ಶೇಂಗಾ, ತೊಗರಿ, ಉದ್ದು, ಸಜ್ಜೆ, ಹೆಸರು ಹಾಗೂ ಹುರುಳಿ ಬೆಳೆಗಳನ್ನು ಬೆಳೆಯಲು ರೈತರು ಭೂಮಿ ಹದಗೊಳಿಸುತ್ತಿದ್ದಾರೆ. ಬಿತ್ತನೆ ಕಾರ್ಯಕ್ಕೆ ಅಗತ್ಯವಿರುವ ರಸಗೊಬ್ಬರವನ್ನು ಪಡೆಯಲು ರೈತರಿಗೆ ಆಧಾರ್ ಕಾರ್ಡ್ ಕಡ್ಡಾಯಗೊಳಿಸಲಾಗಿದ್ದು, ಸಕಾಲಕ್ಕೆ ಗೊಬ್ಬರ ಪೂರೈಕೆಗೆ ಇಲಾಖೆ ಕ್ರಮ ವಹಿಸಿದೆ.

ವಿಶೇಷವೆಂದರೆ, ಈ ಬಾರಿ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇರುವುದರಿಂದ ಜಿಲ್ಲೆಯ ರೈತರು ಸೂರ್ಯಕಾಂತಿ (ಸೂರ್ಯಪಾನ್) ಬೆಳೆ ಬಿತ್ತನೆಗೆ ಹೆಚ್ಚಿನ ಒಲವು ತೋರುತ್ತಿದ್ದಾರೆ. ಅದರಲ್ಲೂ ಪ್ರಮುಖವಾಗಿ ಹುನಗುಂದ, ಇಲಕಲ್ಲ ಹಾಗೂ ಬಾದಾಮಿ ಭಾಗಗಳಲ್ಲಿ ಸೂರ್ಯಕಾಂತಿ ಬಿತ್ತನೆ ಪ್ರಮಾಣ ಗಣನೀಯವಾಗಿ ಹೆಚ್ಚಾಗುವ ಸಾಧ್ಯತೆಯಿದೆ. ಈ ಕುರಿತು ಮಾಹಿತಿ ನೀಡಿರುವ ಬಾಗಲಕೋಟೆ ಜಿಲ್ಲಾ ಕೃಷಿ ಜಂಟಿ ನಿರ್ದೇಶಕರಾದ ರುದ್ರೇಶ್ ಅವರು, ಈ ವರ್ಷ ನಿಗದಿತ ಗುರಿಗಿಂತಲೂ ಹೆಚ್ಚು ಬಿತ್ತನೆಯಾಗುವ ನಿರೀಕ್ಷೆಯಿದೆ. ರೈತ ಬಾಂಧವರು ಮುಂಗಾರು ಬಿತ್ತನೆಗಾಗಿ ಸರ್ಕಾರದಿಂದ ಸಿಗುವ ರಿಯಾಯಿತಿ ದರದ ಬಿತ್ತನೆ ಬೀಜ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
