ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಮುಡೇವಾಡಿ, ಕೊತ್ತಗುಡ್ಡೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರ 80 ವರ್ಷಗಳ ಬಸ್ ಸಮಸ್ಯೆಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಹಾಗೂ ಸ್ಥಳೀಯರ ನಿರಂತರ ಪ್ರಯತ್ನ ಮತ್ತು ಮನವಿಗೆ ಸ್ಪಂದಿಸಿದ ಸಾರಿಗೆ ಸಂಸ್ಥೆ ಅಧಿಕಾರಿಗಳು ಕೇವಲ 4-5 ದಿನಗಳಲ್ಲೇ ಹೊಸ ಬಸ್ ಸಂಚಾರ ಆರಂಭಿಸಿದ್ದು, ಗ್ರಾಮಸ್ಥರು ಸಿಹಿ ಹಂಚಿ ಸತ್ಕಾರ ಮಾಡಿದ್ದಾರೆ.

ಖಾನಾಪುರ ತಾಲೂಕಿನ ಗಣೇಬೈಲ, ಹತ್ತರಗುಂಜಿ, ಮುಡೇವಾಡಿ, ಕೊತ್ತಗುಡ್ಡೆ ಹಾಗೂ ಢುಖರವಾಡಿ ಗ್ರಾಮಗಳಿಗೆ ಸ್ವಾತಂತ್ರ್ಯ ಸಿಕ್ಕು 80 ವರ್ಷಗಳು ಕಳೆದರೂ ಸೂಕ್ತ ಬಸ್ ಸಂಚಾರ ಇರಲಿಲ್ಲ. ಇದರಿಂದ ಶಾಲಾ ಮಕ್ಕಳು, ಹಿರಿಯರು ಹಾಗೂ ರೈತರು ತೀವ್ರ ತೊಂದರೆ ಅನುಭವಿಸುತ್ತಿದ್ದರು. ಇತ್ತೀಚೆಗೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ವತಿಯಿಂದ ಖಾನಾಪುರ ಸಾರಿಗೆ ಸಂಸ್ಥೆಯ ಡಿಪೋ ವ್ಯವಸ್ಥಾಪಕರು ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಅಧಿಕಾರಿಗಳು ಈ ಸಮಸ್ಯೆಗೆ ತಕ್ಷಣ ಸ್ಪಂದಿಸಿ, ಕೇವಲ ನಾಲ್ಕೈದು ದಿನಗಳಲ್ಲೇ ನೂತನ ಬಸ್ ಸೌಲಭ್ಯವನ್ನು ಕಲ್ಪಿಸಿಕೊಟ್ಟಿದ್ದಾರೆ. ಇಂದು ಹೊಸ ಮಾರ್ಗದ ಬಸ್ ಸಂಚಾರ ಪ್ರಾರಂಭವಾಗುತ್ತಿದ್ದಂತೆ ಶಾಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಾಗೂ ಗ್ರಾಮಸ್ಥರು ಪಟಾಕಿ ಸಿಡಿಸಿ, ಸಿಹಿ ಹಂಚಿ ಅತ್ಯಂತ ಸಡಗರದಿಂದ ಸಂಭ್ರಮಿಸಿದರು.
ಜನರ ಬಹುದಿನಗಳ ಬೇಡಿಕೆಯನ್ನು ಈಡೇರಿಸಿ ಬಸ್ ವ್ಯವಸ್ಥೆ ಕಲ್ಪಿಸಿಕೊಟ್ಟ ಖಾನಾಪುರ ಡಿಪೋ ಮ್ಯಾನೇಜರ್ ಸಂತೋಷ ಬೆನಕನಕೊಪ್ಪ, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಾಜಶೇಖರ್ ಹಿಂಡಲಗಿ ಮತ್ತು ರಾಘವೇಂದ್ರ ಚಲವಾದಿ ಅವರಿಗೆ ಗ್ರಾಮಸ್ಥರು ಶಾಲ ಹೊದಿಸಿ ಭವ್ಯವಾಗಿ ಸತ್ಕರಿಸಿದರು.


ಖಾನಾಪುರ ತಾಲೂಕಿನ ಮುಡೇವಾಡಿ, ಕೊತ್ತಗುಡ್ಡೆ ಮತ್ತು ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಕಳೆದ 80 ವರ್ಷಗಳಿಂದ ಸೂಕ್ತ ಬಸ್ ವ್ಯವಸ್ಥೆ ಇರಲಿಲ್ಲ.ಈ ಸಮಸ್ಯೆಯನ್ನು ಬಗೆಹರಿಸಲು ಕೆ.ಎಸ್.ಆರ್.ಟಿ.ಸಿ ಜಿಲ್ಲಾಧಿಕಾರಿಗಳು ಹಾಗೂ ಡಿಪೋ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಗಿತ್ತು.ಅಧಿಕಾರಿಗಳು ಈ ಮನವಿಗೆ ತಕ್ಷಣ ಸ್ಪಂದಿಸಿ, ಕೇವಲ 4-5 ದಿನಗಳಲ್ಲೇ ಈ ಗ್ರಾಮಗಳಿಗೆ ಹೊಸ ಬಸ್ ಸೌಲಭ್ಯವನ್ನು ಕಲ್ಪಿಸಿಕೊಟ್ಟಿದ್ದಾರೆ.ಈ ಸೌಲಭ್ಯದಿಂದಾಗಿ ಶಾಲಾ ಮಕ್ಕಳು, ಹಿರಿಯರು ಮತ್ತು ರೈತರು ಸೇರಿದಂತೆ ಇಡೀ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದರು.
ಇನ್ನೋರ್ವರು ಮಾತನಾಡಿ ಖಾನಾಪುರ ತಾಲೂಕಿನ ಜನರ ಬಹುದಿನಗಳ ಬೇಡಿಕೆಯನ್ನು ಈಡೇರಿಸಲು ಈ ಬಸ್ ಸೌಲಭ್ಯವನ್ನು ಕಲ್ಪಿಸಲಾಗಿದೆ.ಗ್ರಾಮದ ಸಾರ್ವಜನಿಕರಿಗೆ ಮತ್ತು ಮುಖ್ಯವಾಗಿ ಶಾಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಹೊಸ ಮಾರ್ಗಕ್ಕೆ ಚಾಲನೆ ನೀಡಲಾಗಿದೆ. ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಸತತ ಪ್ರಯತ್ನದಿಂದಾಗಿ ಅಧಿಕಾರಿಗಳು ಈ ಸಮಸ್ಯೆಗೆ ಶೀಘ್ರವಾಗಿ ಸ್ಪಂದಿಸಿದ್ದಾರೆ. ಗ್ರಾಮಸ್ಥರೆಲ್ಲರೂ ಬೆಳಗಿನ ಮತ್ತು ಸಾಯಂಕಾಲದ ಈ ಬಸ್ ಸೇವೆಯ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ವಿನಂತಿಸುತ್ತೇವೆ.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ರವಿ ಮಾದರ, ಉಪಾಧ್ಯಕ್ಷ ಉಜ್ವಲ ಕುಂಬಾರ, ಬಸವರಾಜ ಮಾದರ, ಶಶಿಧರ ನಾಯಕ, ಪರಶುರಾಮ ಅಲೋಲಕರ್ ರಾಜಾರಾಮ್ ಅಲೋಲಕರ್ ಮೋಹನ್ ಗುರವ್, ವಿಜಯ್ ಗುರವ್), ಬೈರೂ ಕುಂಬಾರ, ದೊಂಡಿಬಾ ಕುಂಬಾರ, ಸಂಜಯ್ ಕುಂಬಾರ, ಕಲ್ಲಪ್ಪ ಕುಂಬಾರ ಹಾಗೂ ಹಲಕರ್ಣಿ ಗ್ರಾಮ ಪಂಚಾಯತ್ ಸಿಬ್ಬಂದಿಗಳು, ಸ್ಥಳೀಯ ಜನಪ್ರತಿನಿಧಿಗಳು ಮತ್ತು ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು.
