Khanapur

ಖಾನಾಪುರ ಕಾಡಿನಲ್ಲಿ ಕಾಣೆಯಾಗಿದ್ದ ವೃದ್ಧನ ರಕ್ಷಣೆ: ರಾತ್ರಿಯಿಡೀ ಜಂಟಿ ಕಾರ್ಯಾಚರಣೆ ನಡೆಸಿ ಮಾನವೀಯತೆ ಮೆರೆದ ಭೀಮಗಡ ಅರಣ್ಯ ಇಲಾಖೆ ಅಧಿಕಾರಿಗಳು!

Share

ದನ ಮೇಯಿಸಲು ಹೋಗಿ ದಟ್ಟ ಅರಣ್ಯದಲ್ಲಿ ದಾರಿ ತಪ್ಪಿ ಕಾಣೆಯಾಗಿದ್ದ 65 ವರ್ಷದ ವೃದ್ಧನನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸಕಾಲದಲ್ಲಿ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ನಾಡಿಗೆ ಕರೆತಂದಿದ್ದಾರೆ. ರಾತ್ರಿಯಿಡೀ ಕಾಡಿನಲ್ಲಿ ಕಾರ್ಯಾಚರಣೆ ನಡೆಸಿ ವೃದ್ಧನ ಪ್ರಾಣ ಉಳಿಸುವ ಮೂಲಕ ಹೆಮ್ಮಡಗಾ ಅರಣ್ಯ ಸಿಬ್ಬಂದಿ ಭಾರಿ ಮಾನವೀಯತೆ ಮೆರೆದಿದ್ದಾರೆ.

ಖಾನಾಪುರ ತಾಲ್ಲೂಕಿನ ಹೆಮ್ಮಡಗಾ ಗ್ರಾಮದ ಹೇಮಣ್ಣ ಮಾದಾರ (65) ಎಂಬ ವೃದ್ಧರು ಜಮೀನಿನಲ್ಲಿ ದನ ಮೇಯಿಸಲು ಹೋಗಿದ್ದಾಗ ದಟ್ಟ ಕಾಡಿನಲ್ಲಿ ದಾರಿ ತಪ್ಪಿ ನಾಪತ್ತೆಯಾಗಿದ್ದರು. ಸಂಜೆಯಾದರೂ ಕೇವಲ ದನಗಳು ಮಾತ್ರ ಮನೆಗೆ ಮರಳಿದ್ದರಿಂದ ಆತಂಕಗೊಂಡ ಗ್ರಾಮಸ್ಥರು ತಕ್ಷಣ ಭೀಮಗಡ ವನ್ಯಜೀವಿ ವಲಯದ ಆರ್‌.ಎಫ್‌.ಓ ನದಾಫ್ ಅವರಿಗೆ ಮಾಹಿತಿ ನೀಡಿ ಸಹಾಯ ಕೋರಿದ್ದರು. ಪರಿಸ್ಥಿತಿಯ ಗಂಭೀರತೆ ಅರಿತ ಆರ್‌.ಎಫ್‌.ಓ ನದಾಫ್ ಅವರು ತಕ್ಷಣವೇ ಹಿರಿಯ ಅಧಿಕಾರಿಗಳಾದ ಎಸಿಎಫ್ ಬಸವರಾಜ ವಾಳದ ಅವರ ಮಾರ್ಗದರ್ಶನ ಪಡೆದು, ಹೆಮ್ಮಡಗಾ ವನ್ಯಜೀವಿ ಸಿಬ್ಬಂದಿ ಹಾಗೂ ಗ್ರಾಮಸ್ಥರನ್ನೊಳಗೊಂಡ 5 ವಿಶೇಷ ತಂಡಗಳನ್ನು ರಚಿಸಿದರು. ಹಿಂಸ್ರಪಶುಗಳ ಭಯವಿರುವ ದಟ್ಟ ಅರಣ್ಯದೊಳಗೆ ರಾತ್ರಿ 8 ಗಂಟೆಗೆ ಧುಮುಕಿದ ಅಧಿಕಾರಿಗಳ ತಂಡ, ಬೆಳಗಿನ ಜಾವ 6 ಗಂಟೆಯವರೆಗೆ ಸತತ 10 ಗಂಟೆಗಳ ಕಾಲ ಜೀವದ ಹಂಗು ತೊರೆದು ಹುಡುಕಾಟ ನಡೆಸಿತು. ಅಂತಿಮವಾಗಿ ವೃದ್ಧನನ್ನು ಸುರಕ್ಷಿತವಾಗಿ ಪತ್ತೆಹಚ್ಚಿ ನಾಡಿಗೆ ಮರಳಿ ತರುವಲ್ಲಿ ಯಶಸ್ವಿಯಾದ ಅರಣ್ಯ ಇಲಾಖೆಯ ಈ ಸಾಹಸ ಮತ್ತು ಮಾನವೀಯ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ಶ್ಲಾಘನೆ ವ್ಯಕ್ತವಾಗುತ್ತಿದೆ.

Tags:

error: Content is protected !!