ಖಾನಾಪೂರ ತಾಲೂಕಿನ ಜಾಂಬೋಟಿ ಸಮೀಪದ ಹುಳಂದ ಗ್ರಾಮದಲ್ಲಿ ಕರಡಿ ದಾಳಿಯಿಂದ ಯುವ ರೈತನೊಬ್ಬ ಗಂಭೀರವಾಗಿ ಗಾಯಗೊಂಡಿರುವ ನಡುಕ ಹುಟ್ಟಿಸುವ ಘಟನೆ ಸಂಭವಿಸಿದೆ. ಎಂದಿನಂತೆ ಕಾಡಿಗೆ ದನ ಮೇಯಿಸಲು ಹೋಗಿದ್ದಾಗ ಈ ದುರಂತ ಸಂಭವಿಸಿದ್ದು, ಸದ್ಯ ಗಾಯಾಳು ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
:** ಹುಳಂದ ಗ್ರಾಮದ ಮಹೇಶ್ ಗಾವಡೆ (25) ಎಂಬ ಯುವ ರೈತ ಪ್ರತಿದಿನದಂತೆ ಅರಣ್ಯ ಪ್ರದೇಶಕ್ಕೆ ತನ್ನ ಹಸುವನ್ನು ಮೇಯಿಸಲು ತೆರಳಿದ್ದರು. ಸಂಜೆ ವೇಳೆಗೆ ದನಗಳನ್ನು ಕರೆದುಕೊಂಡು ಮನೆಗೆ ಮರಳುತ್ತಿದ್ದ ಸಂದರ್ಭದಲ್ಲಿ ಪೊದೆಯೊಳಗಿಂದ ಏಕಾಏಕಿ ಬಂದ ಕರಡಿಯೊಂದು ಇವರ ಮೇಲೆ ಭೀಕರವಾಗಿ ದಾಳಿ ಮಾಡಿದೆ. ಕರಡಿಯ ಕೋಪದಿಂದ ತನ್ನ ಪ್ರಾಣ ಉಳಿಸಿಕೊಳ್ಳಲು ಮಹೇಶ್ ತಕ್ಷಣವೇ ಸಮೀಪದ ಮರ ಹತ್ತಲು ಪ್ರಯತ್ನಿಸಿದರಾದರೂ, ಹಿಂಬಾಲಿಸಿದ ಕರಡಿ ಅವರ ಕಾಲನ್ನು ಬಲವಾಗಿ ಕಚ್ಚಿ ಎಳೆದಿದೆ. ಕರಡಿಯ ನಖ ಮತ್ತು ಹಲ್ಲಿನ ದಾಳಿಯಿಂದ ಮಹೇಶ್ ಕಾಲಿಗೆ ಗಂಭೀರ ಗಾಯಗಳಾಗಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಸ್ಥಳೀಯರು ತಕ್ಷಣವೇ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಮಹೇಶ್ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಪಡೆಯುತ್ತಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

*ಅಲ್ತಾಫ್ ಎಂ ಬಸರೀಕಟ್ಟಿ, ಇನ್ ನ್ಯೂಸ್, ಖಾನಾಪೂರ.*
