ಬಾಗಲಕೋಟೆಯಲ್ಲಿ ಸರ್ಕಾರಿ ಅಧಿಕಾರಿಯೊಬ್ಬರ ಮೇಲೆ ರೈತನೊಬ್ಬ ಚಪ್ಪಲಿಯಿಂದ ಹಲ್ಲೆ ನಡೆಸಿರುವ ಘಟನೆ ತೀವ್ರ ಸಂಚಲನ ಮೂಡಿಸಿದೆ. ಬಿಟಿಡಿಎ ಅಧ್ಯಕ್ಷರ ಪಿಎ ಹಾಗೂ ಕೇಸ್ ವರ್ಕರ್ ಆಗಿ ಕೆಲಸ ಮಾಡುತ್ತಿರುವ ನೀಲಕಂಠ ಅಂಕದ ಅವರ ಮೇಲೆ ರೈತ ಬಸಪ್ಪ ದೊಡ್ಡಮನಿ ಏಕಾಏಕಿ ಹಲ್ಲೆ ನಡೆಸಿದ್ದು, ಈ ಸಂಬಂಧ ನವನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯಕ್ಕೆ ಅಡ್ಡಿ ಸೇರಿದಂತೆ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿದೆ. ಘಟನೆಯಿಂದ ತೀವ್ರವಾಗಿ ನೊಂದಿರುವ ಅಧಿಕಾರಿ ಅಂಕದ ಮತ್ತು ಅವರ ಕುಟುಂಬಸ್ಥರು ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ್ದಾರೆ.
ನೊಂದ ಅಧಿಕಾರಿ ನೀಲಕಂಠ ಅಂಕದ ಅವರು ಘಟನೆಯ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಬಿಟಿಡಿಎ ಕಚೇರಿ ಆವರಣದಲ್ಲಿ ಬೇರೆ ವಿಚಾರಕ್ಕೆ ಪ್ರತಿಭಟನೆ ನಡೆಯುತ್ತಿತ್ತು. ಈ ವೇಳೆ ಅಲ್ಲಿಗೆ ಬಂದ ರೈತ ಬಸಪ್ಪ ದೊಡ್ಡಮನಿ, ‘ನನ್ನ ಫೈಲ್ ಯಾಕೆ ಮಾಡಿಲ್ಲ’ ಎಂದು ಏಕಾಏಕಿ ಗಲಾಟೆ ಆರಂಭಿಸಿದ್ದಾನೆ. ಅದಕ್ಕೆ ನಾನು ‘ನಿನ್ನ ಫೈಲ್‌ಗೂ ನನಗೂ ಸಂಬಂಧವಿಲ್ಲ, ಆರ್‌ಒ, ಎಸ್‌ಎಲ್‌ಒ ಅಥವಾ ಅಧ್ಯಕ್ಷರನ್ನು ಭೇಟಿಯಾಗು’ ಎಂದು ತಿಳಿಸಿದರೂ ಕೇಳದೆ, ‘ನೀನು ದುಡ್ಡು ತಿಂದಿದ್ದೀಯಾ’ ಎಂದು ಇಲ್ಲಸಲ್ಲದ ಆರೋಪ ಮಾಡಿ ಚಪ್ಪಲಿಯಿಂದ ಹೊಡೆದಿದ್ದಾನೆ ಎಂದು ಅಳಲು ತೋಡಿಕೊಂಡಿದ್ದಾರೆ. ತಮಗೆ ದೊಡ್ಡ ಕುಟುಂಬವಿದ್ದು, ತಾವೇ ಹಿರಿಯ ಮಗನಾಗಿರುವುದರಿಂದ ಈ ಘಟನೆ ತೀವ್ರ ಮುಜುಗರ ಹಾಗೂ ಮಾನಸಿಕ ನೋವು ತಂದಿದೆ. ತಾನು ಹಣ ತಿಂದಿದ್ದರೆ ಸಾಬೀತುಪಡಿಸಲಿ, ಇಲ್ಲದಿದ್ದರೆ ಸೂಕ್ತ ತನಿಖೆ ನಡೆಸಿ ನನ್ನ ಮೇಲಿನ ಅಪವಾದ ದೂರ ಮಾಡಬೇಕು ಮತ್ತು ಹಲ್ಲೆಕೋರ ರೈತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಇತ್ತ ಅಧಿಕಾರಿಯ ಸಹೋದರ ಕೂಡ ಘಟನೆಗೆ ತೀವ್ರ ಅಸಮಾಧಾನ ಹೊರಹಾಕಿದ್ದು, ಚಪ್ಪಲಿಯಿಂದ ಹೊಡೆದ ಘಟನೆ ಮತ್ತು ಆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅತಿಯಾಗಿ ವೈರಲ್ ಮಾಡಿರುವುದು ನಮ್ಮ ಇಡೀ ಕುಟುಂಬಕ್ಕೆ ತೀವ್ರ ಮುಜುಗರ ಉಂಟುಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ ಅಣ್ಣ ಯಾವುದೇ ತಪ್ಪು ಮಾಡಿಲ್ಲ, ಅವರು ಆರ್‌ಒ ಹಾಗೂ ಇಂಜಿನಿಯರ್ ಪೋಸ್ಟ್‌ನಲ್ಲಿದ್ದವರು, ಅವರ ಮೇಲೆ ಈ ರೀತಿ ಹಲ್ಲೆ ನಡೆಸಿರುವುದು ಸರಿ ಅಲ್ಲ. ತಕ್ಷಣವೇ ಬಿಟಿಡಿಎ ಅಧಿಕಾರಿಗಳು ಹಾಗೂ ಬಿಟಿಡಿಎ ಅಧ್ಯಕ್ಷರು ಜಂಟಿ ಸುದ್ದಿಗೋಷ್ಠಿ ನಡೆಸಿ, ನಮ್ಮ ಸಹೋದರನ ಯಾವುದೇ ತಪ್ಪಿಲ್ಲ ಎಂಬುದನ್ನು ಸಾರ್ವಜನಿಕವಾಗಿ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ಸದ್ಯ ಕರ್ತವ್ಯಕ್ಕೆ ಅಡ್ಡಿ, ಅವಾಚ್ಯ ಪದಗಳಿಂದ ನಿಂದನೆ ಹಾಗೂ ಜೀವಭಯ ಒಡ್ಡಿದ ಆರೋಪದ ಮೇಲೆ ನವನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.
