ನಿಪ್ಪಾಣಿ ತಾಲೂಕಿನ ಭೋಜ ಗ್ರಾಮದಲ್ಲಿ ಕಳೆದ ಹಲವು ವರ್ಷಗಳಿಂದ ಶುದ್ಧ ಕುಡಿಯುವ ನೀರಿನ ಸಮಸ್ಯೆ ತಲೆದೂರಿದ್ದು, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ಜಲ ಜೀವನ್ ಮಿಷನ್’ ಯೋಜನೆ ಸಂಪೂರ್ಣ ಹಳ್ಳ ಹಿಡಿದಿದೆ. ಮನೆಮನೆಗೆ ನಲ್ಲಿಗಳನ್ನು ಅಳವಡಿಸಿ ವರ್ಷಗಳೇ ಉರುಳಿದರೂ ನೀರು ಮಾತ್ರ ಬಂದಿಲ್ಲ. ಗ್ರಾಮದ ಪಕ್ಕದಲ್ಲೇ ದೂಧಗಂಗಾ ನದಿ ಹರಿಯುತ್ತಿದ್ದರೂ ಜನರಿಗೆ ಕುಡಿಯುವ ನೀರಿಲ್ಲದಂತಾಗಿದೆ. ಇಲಾಖೆಯ ಈ ನಿರ್ಲಕ್ಷ್ಯವನ್ನು ಖಂಡಿಸಿ ಗ್ರಾಮಸ್ಥರು ಭೋಜ ಗ್ರಾಮ ಪಂಚಾಯಿತಿ ಎದುರು ಹಗಲಿರುಳು ಉಪವಾಸ ಸತ್ಯಾಗ್ರಹ ನಡೆಸಿದರು.


ತಾಪಂ ಸದಸ್ಯ ಪ್ರಕಾಶ ವಡ್ಡರ, ಮಾಜಿ ಗ್ರಾಪಂ ಸದಸ್ಯ ಸಚಿನ ಮೋಹಿತೆ, ಆರೀಫ್ ಮಕಾನದಾರ, ಡಾ. ಬಾಪುಸಾಹೇಬ ಹಂಪಣ್ಣವರ, ವಿಪುಲ್ ಡೇರೆ ಸೇರಿದಂತೆ ಪ್ರಮುಖರ ಮುಂದಾಳತ್ವದಲ್ಲಿ ಧರಣಿ ಆರಂಭವಾಯಿತು.
ಹೋರಾಟಕ್ಕೆ ಬೆಂಬಲ ಸೂಚಿಸಿ ಮಾತನಾಡಿದ ಜೈ ಕರ್ನಾಟಕ ರೈತ ಸಂಘಟನೆಯ ಪ್ರಮುಖ ಶೀತಲ್ ಬಾಗೆ ಮಾತನಾಡಿ ಶುದ್ಧ ಕುಡಿಯುವ ನೀರು ನಾಗರಿಕರ ಮೂಲಭೂತ ಹಕ್ಕು. ಜನರಿಗೆ ನ್ಯಾಯ ಸಿಗುವವರೆಗೂ ನಮ್ಮ ಬೆಂಬಲ ಇರಲಿದೆ” ಎಂದರು. ಮುಖಂಡ ರಮೇಶ್ ಪಾಟೀಲ ಮಾತನಾಡಿ ಈ ಹಿಂದೆ ಜಿಲ್ಲಾಧಿಕಾರಿಗಳು, ಜಿಪಂ ಸಿಇಒ ಹಾಗೂ ಚಿಕ್ಕೋಡಿ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಅನಿವಾರ್ಯವಾಗಿ ಉಪವಾಸ ಸತ್ಯಾಗ್ರಹ ಕೂರಬೇಕಾಯಿತು ಎಂದು ಬೇಸರ ವ್ಯಕ್ತಪಡಿಸಿದರು.

