ಜಮೀರ್ ಅಹ್ಮದ್ ಖಾನ್ ಅವರಿಗೆ ತಕ್ಷಣವೇ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದಲ್ಲಿ ಮುಸ್ಲಿಂ ಸಮಾಜದ ನಾಯಕರು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಪಟ್ಟಣದಲ್ಲಿಂದು ಜಮೀರ್ ಅಹ್ಮದ್ ಖಾನ್ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕೆಂದು ಆಗ್ರಹಿಸಿ ಮುಸ್ಲಿಂ ಸಮುದಾಯದ ನಾಯಕರು ರಸ್ತೆಗಿಳಿದು ಬೃಹತ್ ಪ್ರತಿಭಟನೆ ನಡೆಸಿದರು. ಮಹಮ್ಮದೀಯಾ ಅಂಜುಮನ್ ಕಮೀಟಿ ನೇತೃತ್ವದಲ್ಲಿ ಮಹಾಲಿಂಗಪುರ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ನೂರಾರು ಮುಸ್ಲಿಂ ಬಾಂಧವರು ಒಟ್ಟಾಗಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಪ್ರಮುಖ ವೃತ್ತಗಳಲ್ಲಿ ಜಮೀರ್ ಅಹ್ಮದ್ ಖಾನ್ ಅವರ ಫೋಟೋಗಳನ್ನು ಕೈಯಲ್ಲಿ ಹಿಡಿದು, ಅವರ ಪರವಾಗಿ ಘೋಷಣೆಗಳನ್ನು ಕೂಗುತ್ತಾ ಸರ್ಕಾರಕ್ಕೆ ತಮ್ಮ ಆಗ್ರಹವನ್ನು ತಲುಪಿಸಿದರು.
ಜಮೀರ್ ಅಹ್ಮದ್ ಖಾನ್ ಅವರು ಸಮುದಾಯದ ಪ್ರಮುಖ ನಾಯಕರಾಗಿದ್ದು, ಅವರಿಗೆ ತಕ್ಷಣವೇ ಸಚಿವ ಸ್ಥಾನ ನೀಡುವ ಮೂಲಕ ಸೂಕ್ತ ಪ್ರಾತಿನಿಧ್ಯ ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಒಂದು ವೇಳೆ ಸಚಿವ ಸ್ಥಾನ ನೀಡಲು ವಿಳಂಬ ಧೋರಣೆ ಅನುಸರಿಸಿದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಮಹಮ್ಮದೀಯಾ ಅಂಜುಮನ್ ಕಮೀಟಿಯ ಪದಾಧಿಕಾರಿಗಳು ಎಚ್ಚರಿಸಿದ್ದಾರೆ. ಸದ್ಯ ಪಟ್ಟಣದಲ್ಲಿ ಪ್ರತಿಭಟನೆಯ ಕಾವು ಹೆಚ್ಚಾಗಿದ್ದು, ಪರಿಸ್ಥಿತಿ ನಿಯಂತ್ರಿಸಲು ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

