Bagalkot

ನೀರಿಗಾಗಿ ಇಳಕಲ್ ನಗರಸಭೆಗೆ ಬೀಗ ಹಾಕಿ ಜನರ ಆಕ್ರೋಶ ಸ್ಫೋಟ; ಪೌರಾಯುಕ್ತರ ಕೊಠಡಿ ಮುಂದೆ ಖಾಲಿ ಕೊಡಗಳ ಪ್ರದರ್ಶನ!

Share

ಬಾಗಲಕೋಟೆ ಜಿಲ್ಲೆಯ ಇಳಕಲ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ಸಾರ್ವಜನಿಕರ ಆಕ್ರೋಶದ ಕಟ್ಟೆ ಒಡೆದಿದೆ. ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಖಂಡಿಸಿ ಲಕ್ಷ್ಮಿನಗರ ನಿವಾಸಿಗಳು ಇಡೀ ನಗರಸಭೆಗೇ ಬೀಗ ಜಡಿದು ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದ ಲಕ್ಷ್ಮಿನಗರದಲ್ಲಿ ಕಳೆದ ಕೆಲವು ದಿನಗಳಿಂದ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಖಂಡಿಸಿ ಆಕ್ರೋಶಗೊಂಡ ನಿವಾಸಿಗಳು ಇಳಕಲ್ ನಗರಸಭೆ ಕಾರ್ಯಾಲಯಕ್ಕೆ ಬೀಗ ಹಾಕಿ ವಿನೂತನವಾಗಿ ಪ್ರತಿಭಟಿಸಿದ್ದಾರೆ.

ನಗರಸಭೆಯ ಒಳಗೆ ನುಗ್ಗಿದ ಪ್ರತಿಭಟನಾಕಾರರು, ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಕೊಠಡಿಗಳಿಂದ ಹೊರಗೆ ಕಳುಹಿಸಿ ಕಚೇರಿಯ ಪ್ರಮುಖ ರೂಮ್‌ಗಳಿಗೆ ಬೀಗ ಜಡಿದರು. ಅಲ್ಲದೆ ಪೌರಾಯುಕ್ತರ ಕೊಠಡಿಯ ಮುಂದೆ ಖಾಲಿ ಕೊಡಗಳನ್ನಿಟ್ಟು ನಗರಸಭೆ ವಿರುದ್ಧ ಘೋಷಣೆಗಳನ್ನು ಕೂಗಿದರು.

ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪೌರಾಯುಕ್ತ ಶ್ರೀನಿವಾಸ್ ಜಾಧವ್ ಅವರು, “ಇಂದೇ ನಿಮ್ಮ ವಾರ್ಡ್‌ನ ನೀರಿನ ಸಮಸ್ಯೆಯನ್ನು ಸಂಪೂರ್ಣವಾಗಿ ಬಗೆಹರಿಸಲಾಗುವುದು” ಎಂದು ಲಿಖಿತ ಭರವಸೆ ನೀಡಿದ ಬಳಿಕ ನಿವಾಸಿಗಳು ಪ್ರತಿಭಟನೆಯನ್ನು ಹಿಂಪಡೆದರು. ಒಂದು ವೇಳೆ ಇಂದೇ ನೀರು ಪೂರೈಕೆಯಾಗದಿದ್ದರೆ ಮುಂದಿನ ದಿನಗಳಲ್ಲಿ ನಗರಸಭೆ ಎದುರು ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಸಾರ್ವಜನಿಕರು ಅಧಿಕಾರಿಗಳಿಗೆ ಕಡಕ್ ಎಚ್ಚರಿಕೆ ನೀಡಿದ್ದಾರೆ. (ಫ್ಲೋ)

Tags:

error: Content is protected !!