State

ಕಾಂಗ್ರೆಸ್‌ನಲ್ಲಿ ಒಳಬೇಗುದಿ ಜೀವಂತ; ಇಂಧನ ತೆರಿಗೆ ಇಳಿಸಲು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಗ್ರಹ!

Share

ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಮೇಲ್ನೋಟಕ್ಕೆ ಸುಗಮವಾಗಿ ನಡೆದಂತೆ ಕಂಡರೂ, ಪಕ್ಷದೊಳಗಿನ ಒಳಬೇಗುದಿ ಕೆಂಡದಂತೆ ಜೀವಂತವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದರೊಂದಿಗೆ, ರಾಜ್ಯ ಸರ್ಕಾರವು ಇಂಧನದ ಮೇಲಿನ ತೆರಿಗೆಯನ್ನು ತಕ್ಷಣವೇ ಕಡಿತಗೊಳಿಸಿ ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ರಾಜ್ಯ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಕಡಿತಗೊಳಿಸಿ ಸಾರ್ವಜನಿಕರಿಗೆ ತಕ್ಷಣವೇ ದರ ಇಳಿಕೆಯ ಮುಖಾಂತರ ಅನುಕೂಲ ಮಾಡಿಕೊಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಉಂಟಾಗಿರುವ ತೈಲ ಬಿಕ್ಕಟ್ಟಿನಿಂದಾಗಿ ಪ್ರಸ್ತುತ ಇಂಧನ ದರದಲ್ಲಿ ಏರಿಳಿತದ ಪರಿಸ್ಥಿತಿ ನಿರ್ಮಾಣವಾಗಿದ್ದು, ಇನ್ನು ಎರಡು ವಾರಗಳಲ್ಲಿ ಯುದ್ಧ ಮುಗಿದು ಎಲ್ಲವೂ ಸರಿಯಾಗಲಿದೆ ಎಂದು ಅವರು ಹೇಳಿದರು. ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಇಂಧನ ದರದಲ್ಲಿ 7 ರೂಪಾಯಿ ಕಡಿತಗೊಳಿಸಿದ್ದನ್ನು ನೆನಪಿಸಿದ ಬೊಮ್ಮಾಯಿ, ಪ್ರಸ್ತುತ ಸಿದ್ದರಾಮಯ್ಯ ಸರ್ಕಾರವು ನಯಾಪೈಸೆ ಕಡಿಮೆ ಮಾಡದೆ, ಉಲ್ಟಾ ತೆರಿಗೆಯನ್ನು ಹೆಚ್ಚಿಸಿದೆ ಎಂದು ಕಟುವಾಗಿ ಟೀಕಿಸಿದರು. ದೇಶದಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಅತಿ ಹೆಚ್ಚು ತೆರಿಗೆ ಹಾಕುತ್ತಿರುವುದು ಕರ್ನಾಟಕ ಸರ್ಕಾರವೇ ಆಗಿದ್ದು, ಜನಪರ ಕಳಕಳಿ ಇದ್ದರೆ ತಕ್ಷಣವೇ ರಾಜ್ಯದ ಪಾಲಿನ ತೆರಿಗೆಯನ್ನು ಇಳಿಸಬೇಕು ಎಂದು ಒತ್ತಾಯಿಸಿದರು.

ಇದೇ ವೇಳೆ ರಾಜ್ಯ ಕಾಂಗ್ರೆಸ್‌ನಲ್ಲಿನ ರಾಜಕೀಯ ಬೆಳವಣಿಗೆಗಳ ಕುರಿತು ಮಾತನಾಡಿದ ಬೊಮ್ಮಾಯಿ, ಕಾಂಗ್ರೆಸ್‌ನಲ್ಲಿ ಅಧಿಕಾರ ಹಸ್ತಾಂತರ ಮೇಲ್ನೋಟಕ್ಕೆ ಬಹಳ ಸುಗಮವಾಗಿ ಆದಂತೆ ಕಾಣಿಸುತ್ತಿದ್ದರೂ, ಒಳಗಿನ ಅಸಮಾಧಾನದ ಕೆಂಡ ಇನ್ನೂ ಜೀವಂತವಾಗಿದೆ ಎಂದು ಲೇವಡಿ ಮಾಡಿದರು. ಪ್ರಸ್ತುತ ನಡೆಯುತ್ತಿರುವ ಖಾತೆ ಹಂಚಿಕೆ ಗೊಂದಲಗಳೇ ಇದಕ್ಕೆ ಸ್ಪಷ್ಟ ಲಕ್ಷಣಗಳಾಗಿವೆ. ಸಿದ್ದರಾಮಯ್ಯ ಅವರ ನಾಯಕತ್ವವನ್ನು ಒಪ್ಪಿಕೊಂಡಂತೆ ಕಾಂಗ್ರೆಸ್‌ನ ಶಾಸಕರು ಮತ್ತು ಮಂತ್ರಿಗಳು ಡಿ.ಕೆ. ಶಿವಕುಮಾರ್ ಅವರನ್ನು ನಾಯಕರನ್ನಾಗಿ ಒಪ್ಪಿಕೊಂಡಿಲ್ಲ ಎಂದು ಅವರು ಬಾಂಬ್ ಸಿಡಿಸಿದರು. ರಾಜಕೀಯವಾಗಿ ಸ್ಥಿರತೆ ಇದ್ದರೆ ಮಾತ್ರ ರಾಜ್ಯದಲ್ಲಿ ಒಳ್ಳೆಯ ಆಡಳಿತ ನೀಡಲು ಸಾಧ್ಯ. ಆದರೆ ಕಾಂಗ್ರೆಸ್ ಪಕ್ಷದ ಈ ಆಂತರಿಕ ಸಂಘರ್ಷಾತ್ಮಕ ರಾಜಕಾರಣದಿಂದಾಗಿ ಅಂತಿಮವಾಗಿ ಸಾಮಾನ್ಯ ಜನರ ಬದುಕು ದುಸ್ತರವಾಗುವುದು ನಿಶ್ಚಿತ ಎಂದು ಆತಂಕ ವ್ಯಕ್ತಪಡಿಸಿದರು.

Tags:

error: Content is protected !!