arrest

ಬೆಳಗಾವಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನಿಗಳ ಅಡ್ಡೆಗೆ ಖಾಕಿ ಲಗ್ಗೆ: ಆರು ಮಂದಿ ಬಂಧನ, ಮದ್ಯ ಜಪ್ತಿ!

Share

ಬೆಳಗಾವಿ ನಗರದ ವಿವಿಧೆಡೆ ಸಾರ್ವಜನಿಕ ಸ್ಥಳಗಳಲ್ಲಿ ಕುಳಿತು ಮದ್ಯ ಸೇವಿಸುತ್ತಿದ್ದ ಹಾಗೂ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವರ ವಿರುದ್ಧ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಒಟ್ಟು ಆರು ಮಂದಿಯನ್ನು ಹೆಡೆಮುರಿಕಟ್ಟಿದ್ದಾರೆ.

ಬೆಳಗಾವಿ ನಗರ ಹಾಗೂ ಗ್ರಾಮಾಂತರ ಪ್ರದೇಶಗಳ ಸಾರ್ವಜನಿಕ ಸ್ಥಳಗಳಲ್ಲಿ ಕಾನೂನು ಬಾಹಿರವಾಗಿ ಮದ್ಯ ಸೇವನೆ ಮಾಡುತ್ತಿದ್ದವರ ವಿರುದ್ಧ ಮಾರಿಹಾಳ, ಬೆಳಗಾವಿ ಮಾರ್ಕೆಟ್, ಕಾಕತಿ ಮತ್ತು ಹಿರೇಬಾಗೇವಾಡಿ ಠಾಣೆಯ ಪೊಲೀಸರು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ದಿನಾಂಕ 07/06/2026 ರಂದು ನಡೆದ ಈ ವಿಶೇಷ ಕಾರ್ಯಾಚರಣೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವಂತೆ ಮದ್ಯಪಾನ ಮಾಡುತ್ತಿದ್ದ ದುಂಡಯ್ಯ ಹಿರೇಮಠ, ರೇವಣ್ಣ ಪಾಟೀಲ, ರಾಹುಲ ಜಾಧವ, ಆಕಾಶ್ ಲೋಹಾರ, ಅಬೂಬಕ್ಕರ್ ಶಾಹಪೂರಕರ, ಸಮೀರ ಶೇಖ್ ಮತ್ತು ಬಸವಂತ ದೋಂಗಡೆ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಖಾಲಿ ಸೀಸೆಗಳು, ಪ್ಲಾಸ್ಟಿಕ್ ಗ್ಲಾಸ್ ಹಾಗೂ ನೀರಿನ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅಬಕಾರಿ ಕಾಯ್ದೆಯಡಿ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ.

ಇದೇ ವೇಳೆ ಹಿರೇಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಹುಲಕವಿ ಗ್ರಾಮದ ಹದ್ದಿಯಲ್ಲಿ ಯಾವುದೇ ಅಧಿಕೃತ ಪರವಾನಗಿ ಇಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹಿರವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಮಹಿಳೆಯೊಬ್ಬಳನ್ನು ಪಿಎಸ್ಐ ಬಿ. ಕೆ. ಮಿಟಗಾರ ಹಾಗೂ ಸಿಬ್ಬಂದಿ ಯಶಸ್ವಿಯಾಗಿ ಬಂಧಿಸಿದ್ದಾರೆ. ಆಕೆಯ ವಶದಿಂದ ವೆಲ್ಲಿಂಗಟನ್ ವಿಸ್ಕಿ ಹಾಗೂ ಒರಿಜಿನಲ್ ಮದ್ಯದ ಬಾಟಲಿಗಳನ್ನು ಜಪ್ತಿ ಮಾಡಲಾಗಿದ್ದು, ಅಬಕಾರಿ ಕಾಯ್ದೆ ಕಲಂ 32, 34 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಾರ್ವಜನಿಕರ ನೆಮ್ಮದಿಗೆ ಭಂಗ ತರುತ್ತಿದ್ದವರ ವಿರುದ್ಧ ಯಶಸ್ವಿ ದಾಳಿ ನಡೆಸಿ ಸಾರ್ವಜನಿಕರ ಶ್ಲಾಘನೆಗೆ ಪಾತ್ರರಾದ ಪಿಎಸ್ಐ ಹಾಗೂ ಸಿಬ್ಬಂದಿಗಳ ಉತ್ತಮ ಕಾರ್ಯವನ್ನು ಬೆಳಗಾವಿ ನಗರದ ಪೊಲೀಸ್ ಆಯುಕ್ತರು ಮತ್ತು ಡಿಸಿಪಿ ಅವರು ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ.

Tags:

error: Content is protected !!