ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದರೂ ಅಸಮಾಧಾನವಿಲ್ಲ. ಪಕ್ಷ ನಮಗೆ ಸೇವೆ ಮಾಡಲೂ ಸಚಿವ ಸ್ಥಾನವನ್ನು ನೀಡಿದೆ. 2028ರಲ್ಲಿ ನಮ್ಮ 120 ಸೀಟುಗಳು ಗೆದ್ದರೇ ಬಳಿಕ ಸಿಎಂ ಆಗುವ ವಿಚಾರದ ಲೆಕ್ಕಾಚಾರವೆಂದು ಸಚಿವ ಸತೀಶ್ ಜಾರಕಿಹೊಳಿ ಅವರುಹೇಳಿದ್ದಾರೆ.

ಇಂದು ಬೆಳಗಾವಿಯಲ್ಲಿ ಕರೆಯಲಾಗಿದ್ಧ ಮಾಧ್ಯಮಗೋಷ್ಟಿಯಲ್ಲಿ ಅವರು ಮಾತನಾಡಿದರು. ಕೆಪಿಸಿಸಿ ಅಧ್ಯಕ್ಷ ಸ್ಥಾನದ ರೇಸ್ನಲ್ಲಿ ತಮ್ಮ ಹೆಸರು ಟಾಪ್ 6ರಲ್ಲಿದ್ದರೂ ಹುದ್ದೆ ಸಿಗದಿದ್ದಕ್ಕೆ ಯಾರೂ ಅಡ್ಡಗಾಲು ಹಾಕಿಲ್ಲ, ‘ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ’ ನಿಯಮದಡಿ ಈ ನಿರ್ಧಾರವಾಗಿದೆ ಎಂದು ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. ತಮ್ಮ ವಿರುದ್ಧದ ಅಪಪ್ರಚಾರದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದ ಅವರು, ಈ ಹಿನ್ನೆಲೆಯಲ್ಲಿ 2028ರ ಸಿಎಂ ಆಗುವ ಗುರಿ ದೂರವಾಯಿತೇ ಎಂಬ ಪ್ರಶ್ನೆಗೆ ಜಾಣ್ಮೆಯ ಉತ್ತರವನ್ನಿತ್ತರು. 2028ರಲ್ಲಿ ಮೊದಲು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದು, ತಮ್ಮ ಕನಿಷ್ಠ 120 ಸೀಟುಗಳನ್ನು ಗೆಲ್ಲುವುದು ನಮ್ಮ ಮೊದಲ ಗುರಿ, ಆ ಬಳಿಕವಷ್ಟೇ ಮುಂದಿನ ಸಿಎಂ ಲೆಕ್ಕಾಚಾರ ಎಂದು ಮಾರ್ಮಿಕವಾಗಿ ನುಡಿದರು.

ಅಹಿಂದ ನಾಯಕರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಚರ್ಚೆಗೆ ಉತ್ತರಿಸಿದ ಅವರು, ನಾಯಕರು ಇವೆಲ್ಲವನ್ನೂ ಮೀರಿ ಬೆಳೆಯಬೇಕಾಗುತ್ತದೆ ಎಂದರಲ್ಲದೆ, ಸದ್ಯ ತಮಗೆ ಸಚಿವ ಸ್ಥಾನ ನೀಡಿ ಕೆಲಸ ಮಾಡಲು ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದರು. ಇನ್ನು ಡಿಸಿಎಂ ಸ್ಥಾನದ ಕುರಿತು ಮಾತನಾಡುತ್ತಾ, “ನಮಗೆ ಇನ್ನೂ ಅವಕಾಶವಿದೆ. 2016ರಲ್ಲೇ ಸಿಎಂ ಆಗಬೇಕಿದ್ದ ಜಿ. ಪರಮೇಶ್ವರ್ ಅವರು ಇಲ್ಲಿಯವರೆಗೆ ತಾಳ್ಮೆಯಿಂದ ಕಾಯ್ದಿದ್ದಕ್ಕೆ ಅವರಿಗೆ ಈಗ ಡಿಸಿಎಂ ಸ್ಥಾನ ಸಿಕ್ಕಿದೆ, ನಾವು ಕಾಯ್ದರೆ ನಮಗೂ ಸಿಗುತ್ತದೆ” ಎಂದು ಭರವಸೆ ವ್ಯಕ್ತಪಡಿಸಿದರು. ಇದೇ ವೇಳೆ ಅಹಿಂದ ಎಂಬುದು ಒಂದು ಪ್ರತ್ಯೇಕ ಸಂಘಟನೆಯಾಗಿದ್ದು, ಅದರಿಂದ ರಾಜಕೀಯ ಲಾಭವಿರುವುದರಿಂದ ಅದನ್ನು ಮತ್ತಷ್ಟು ಬೆಳೆಸುವ ಕೆಲಸ ಮಾಡುವುದಾಗಿ ತಿಳಿಸಿದರು.
ಸಿದ್ಧರಾಮಯ್ಯ ನಾಯಕತ್ವ ಬದಲಾದರೆ ಕಾಂಗ್ರೆಸ್ 40 ಸೀಟು ಗೆಲ್ಲಲ್ಲ ಎಂಬ ಎಂಎಲ್ಸಿ ಲಖನ್ ಜಾರಕಿಹೊಳಿ ಹಾಗೂ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ , ಅವರು ಯಾರ ಮೇಲಿನ ಸಿಟ್ಟಿಗೆ ಹೀಗೆ ಹೇಳಿದ್ದಾರೋ ಅವರನ್ನೇ ಕೇಳಬೇಕು ಎಂದು ಟಾಂಗ್ ನೀಡಿದರು. ಇನ್ನು ಬೆಳಗಾವಿ ಅಭಿವೃದ್ಧಿ ಕುರಿತು ಮಾತನಾಡಿದ ಅವರು, ನಗರದ ಫ್ಲೈಓವರ್ ನಿರ್ಮಾಣಕ್ಕೆ ಈ ತಿಂಗಳ ಅಂತ್ಯದೊಳಗೆ ಟೆಂಡರ್ ಪ್ರಕ್ರಿಯೆ ಮುಗಿಸಿ, ಮಳೆಗಾಲದ ನಂತರ ಕಾಮಗಾರಿ ಆರಂಭಿಸಲಾಗುವುದು ಎಂದರು. ಜೊತೆಗೆ, ನ್ಯಾಯಾಲಯದಲ್ಲಿರುವ ಎಪಿಎಂಸಿ ಖಾಸಗಿ ಭಾಜೀ ಮಾರ್ಕೆಟ್ ಸಮಸ್ಯೆಯನ್ನು ಬಗೆಹರಿಸುವ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗಳಿಗೆ ಒಪ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
