Vijaypura

ದುಬಾರಿ ದುನಿಯಾದಲ್ಲಿ ಸಂಸಾರ ನೌಕೆ ಸಾಗಿಸೋದೆ ಕಷ್ಟ; ವಿಜಯಪುರ ಮಹಿಳಾ ಮಣಿಗಳಿಗೆ ಗ್ಯಾಸ್ ಸಂಕಷ್ಟ

Share

ಅಡುಗೆ ಅನಿಲದ ಬೆಲೆ ಮತ್ತೆ ಏರಿಕೆಯಾಗಿದ್ದು, ಈಗಾಗಲೇ ಬೆಲೆ ಏರಿಕೆಯ ಬಿಸಿಯಲ್ಲಿ ಕಂಗೆಟ್ಟಿರುವ ಜನಸಾಮಾನ್ಯರಿಗೆ ಮತ್ತೊಂದು ಹೊರೆ ಬಿದ್ದಿದೆ. ಗೃಹ ಬಳಕೆಯ ಸಿಲಿಂಡರ್ ದರವೂ ಏರಿಕೆಯಾಗಿದೆ. ಮಧ್ಯಪ್ರಾಚ್ಯದಲ್ಲಿ ಮುಂದುವರಿದಿರುವ ಯುದ್ಧದ ಪರಿಣಾಮ ಮನೆ ನಿರ್ವಹಣೆ ಯಿಂದ ಹಿಡಿದು ಹೋಟೆಲ್ ಉದ್ಯಮ, ಸಾರಿಗೆ ಕ್ಷೇತ್ರ ಹಾಗೂ ಸಣ್ಣ ವ್ಯಾಪಾರಿಗಳವರೆಗೂ ತಟ್ಟಲಿದ್ದು, ಜನರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇತ್ತ ವಿಜಯಪುರದಲ್ಲೂ ಮಹಿಳೆಯರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಈ ಕುರಿತು ಇಲ್ಲಿದೆ ಡಿಟೇಲ್ಸ್…

ಹೌದು…ದಿನದಿಂದ ದಿನಕ್ಕೆ ಏರುತ್ತಿರುವ ಅಗತ್ಯ ವಸ್ತುಗಳ ಬೆಲೆ ನಡುವೆ ಇದೀಗ ಅಡುಗೆ ಅನಿಲದ ಬೆಲೆ ಏರಿಕೆ ಜನರ ಜೇಬಿಗೆ ಮತ್ತಷ್ಟು ಕತ್ತರಿ ಹಾಕಿದೆ. ಕಳೆದ ಹಲವು ತಿಂಗಳುಗಳಿಂದ ಎಲ್‌ಪಿಜಿ ದರ ಸ್ಥಿರವಾಗಿದ್ದರೂ, ಈಗ ಏಕಾಏಕಿ ಹೆಚ್ಚಳ ವಾಗಿರುವುದು ಮಧ್ಯಮ ಹಾಗೂ ಬಡ ವರ್ಗದ ಕುಟುಂಬಗಳಿಗೆ ಸಂಕಷ್ಟ ತಂದೊಡ್ಡಿದೆ. ಈಗಾಗಲೇ ತರಕಾರಿ, ದಿನಸಿ, ಹಾಲು ಸೇರಿದಂತೆ ನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರು, ಅಡುಗೆ ಅನಿಲದ ದರ ಹೆಚ್ಚಳದಿಂದ ಮನೆಯ ಬಜೆಟ್ ಮತ್ತಷ್ಟು ಅಸ್ತವ್ಯಸ್ತವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಗ್ಯಾಸ್ ಜೊತೆಗೆ ಪೆಟ್ರೋಲ್ ಹಾಗೂ ಡಿಜೇಲ್ ಕೂಡಾ ದುಬಾರಿಯಾಗಿದೆ. ಪೆಟ್ರೋಲ್ ಹಾಗೂ ಡಿಜೇಲ್ ದುಬಾರಿ ಹಿನ್ನೆಲೆಯಲ್ಲಿ ತರಕಾರಿ, ದಿನಸಿ ಸಾಮಾನುಗಳು ಸಹ ದುಬಾರಿಯಾಗಿ ಜನರನ್ನು ಹೈರಾಣಾಗಿಸಿವೆ.

ಅಡುಗೆ ಅನಿಲದ ಬೆಲೆ ಏರಿಕೆಯ ಪರಿಣಾಮ ಕೇವಲ ಮನೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಹೋಟೆಲ್ ಮತ್ತು ಉಪಾಹಾರ ಗೃಹಗಳ ನಿರ್ವಹಣಾ ವೆಚ್ಚವೂ ಹೆಚ್ಚಾಗಲಿದೆ. ವಾಣಿಜ್ಯ ಬಳಕೆಯ ಸಿಲಿಂಡರ್ ದರ ಹೆಚ್ಚಳದಿಂದ ಆಹಾರ ಪದಾರ್ಥಗಳ ದರ ಏರಿಕೆಯಾಗುವ ಸಾಧ್ಯತೆ ಇದೆ. ಈಗಾಗಲೇ ವಿದ್ಯುತ್, ಬಾಡಿಗೆ, ಕಾರ್ಮಿಕ ವೆಚ್ಚಗಳಿಂದ ಒತ್ತಡದಲ್ಲಿರುವ ಹೋಟೆಲ್ ಮಾಲೀಕರು, ಈ ಹೆಚ್ಚುವರಿ ಹೊರೆ ಅಂತಿಮವಾಗಿ ಗ್ರಾಹಕರ ಮೇಲೆಯೇ ಬೀಳಲಿದೆ ಎಂದು ಹೇಳುತ್ತಿದ್ದಾರೆ. ಆಟೋ ಹಾಗೂ ಸಾರಿಗೆ ಕ್ಷೇತ್ರದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಅಡುಗೆ ಅನಿಲ, ಇಂಧನ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಒಂದರ ಹಿಂದೆ ಒಂದರಂತೆ ಜನರ ಬದುಕನ್ನು ದುಬಾರಿಯಾಗಿಸುತ್ತಿದೆ. ವಿರೋಧ ಪಕ್ಷಗಳು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಜನರ ಬದುಕಿನ ಸಮಸ್ಯೆಗಳಿಗಿಂತ ಬೆಲೆ ಏರಿಕೆಗೆ ಸರ್ಕಾರವೇ ಕಾರಣ ಎಂದು ಆರೋಪಿಸಿವೆ. ವಿಜಯಪುರದ ಜನರು ಕೂಡಾ ಬೆಲೆ ನಿಯಂತ್ರಣಕ್ಕೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಒಟ್ಟಾರೆ ಅಡುಗೆ ಅನಿಲ ದರ ಏರಿಕೆ ಮನೆಮಂದಿಯ ಅಡುಗೆ ಕೋಣೆಯಿಂದ ಹಿಡಿದು ಹೋಟೆಲ್ ಉದ್ಯಮ ಹಾಗೂ ಸಾಮಾನ್ಯ ಜನರ ಜೀವನದವರೆಗೂ ಪರಿಣಾಮ ಬೀರಿದ್ದು, ಬೆಲೆ ಏರಿಕೆಯ ಸರಪಳಿಗೆ ಮತ್ತೊಂದು ಕೊಂಡಿ ಸೇರಿಸಿದಂತಾಗಿದೆ. ಬೆಲೆ ನಿಯಂತ್ರಣಕ್ಕೆ ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

Tags:

error: Content is protected !!