Vijaypura

ಪಾನ್‌ಶಾಪ್‌ನಲ್ಲಿ ನಿಗೂಢ ಸ್ಫೋಟ; ಮೂವರಿಗೆ ಗಂಭೀರ ಗಾಯ

Share

ಪಾನ್‌ಶಾಪ್‌ನಲ್ಲಿ ಸಂಭವಿಸಿದ ನಿಗೂಢ ಸ್ಫೋಟದಲ್ಲಿ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಮಮದಾಪೂರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ರವಿಕಿರಣ ಅವರಿಗೆ ಸೇರಿದ ಶೆಡ್ ಮಾದರಿಯ ಪಾನ್‌ಶಾಪ್‌ನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸ್ಫೋಟ ಸಂಭವಿಸಿದ್ದು, ಸ್ಫೋಟದ ತೀವ್ರತೆಗೆ ಅಂಗಡಿಗೆ ಹಾನಿಯಾಗಿದೆ. ಗಾಯಾಳುಗಳನ್ನು ತಕ್ಷಣ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಹೆಸರು ಹಾಗೂ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ. ಘಟನಾ ಸ್ಥಳಕ್ಕೆ ಬಬಲೇಶ್ವರ ಪೊಲೀಸರು, ಅಗ್ನಿಶಾಮಕ ದಳ, ಶ್ವಾನದಳ ಹಾಗೂ ಸೊಕೋ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿವೆ. ಅಂಗಡಿಯೊಳಗಿದ್ದ ಫ್ರಿಜ್‌ಗೆ ಯಾವುದೇ ಹಾನಿಯಾಗದಿ ರುವುದು ಗಮನ ಸೆಳೆದಿದ್ದು, ಹೊರಗಡೆಯಿಂದ ಸ್ಫೋಟ ಸಂಭವಿಸಿರಬಹುದೆಂಬ ಅನುಮಾನ ವ್ಯಕ್ತವಾಗಿದೆ.

ಪರಿಶೀಲನೆ ವೇಳೆ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ. ಇದೇ ವೇಳೆ, ನಿನ್ನೆ ಸಂಜೆ ಬಳಿಕ ಗ್ರಾಮದಲ್ಲಿ ಮಳೆ ಸುರಿದಿದ್ದರಿಂದ ಸಿಡಿಲು ಬಡಿದ ಪರಿಣಾಮ ಈ ಘಟನೆ ನಡೆದಿರಬಹುದೇ ಎಂಬ ಸಾಧ್ಯತೆಯನ್ನೂ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಸ್ಫೋಟಕ್ಕೆ ನಿಖರ ಕಾರಣ ಏನು ಎಂಬುದು ತನಿಖೆ ಪೂರ್ಣಗೊಂಡ ಬಳಿಕವೇ ತಿಳಿದುಬರಲಿದ್ದು, ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Tags:

error: Content is protected !!