ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳು ವಿದ್ಯಾರ್ಥಿಗಳ ಭವಿಷ್ಯವನ್ನು ದಿಕ್ಕು ತಪ್ಪಿಸುವ ಮಾಯಾಜಾಲವಾಗಿದ್ದು, ವಿದ್ಯಾರ್ಥಿಗಳು ತಮ್ಮ ಗುರಿಯತ್ತ ದೃಢ ಹೆಜ್ಜೆ ಇಡಬೇಕು ಎಂದು ಜಲನಗರ ಪೊಲೀಸ್ ಠಾಣೆಯ ಪಿಎಸ್‌ಐ ಮಹೇಶ ಸಂಖ ಕಿವಿಮಾತು ಹೇಳಿದರು. ಅವರು ವಿಜಯಪುರ ನಗರದ ರವೀಂದ್ರನಾಥ ಠಾಗೋರ್ ಸಿಬಿಎಸ್ಇ ಶಾಲೆಯಲ್ಲಿ ಆಯೋಜಿಸಿದ್ದ ಎಸ್‌ಆರ್‌ಟಿಎಸ್ ಆ್ಯಪ್, ಶಾಲಾ ಕ್ಯಾಲೆಂಡರ್ ಬಿಡುಗಡೆ ಹಾಗೂ ಪಾಲಕರಿಗೆ ಸಿಬಿಎಸ್ಇ ಪರಿಚಯಾತ್ಮಕ ಕಾರ್ಯಕ್ರಮಗಳ ಸಂಗಮ ಪರಿವರ್ತನ ಕಾರ್ಯಕ್ರ. ಉದ್ಘಾಟಿಸಿ ಅವರು ಮಾತನಾಡಿದರು.


ಶಿಕ್ಷಣವೇ ಜೀವನದ ಬೆಳಕಿನ ದೀಪ. ಆ ದೀಪದ ಬೆಳಕಿನಲ್ಲಿ ಭವಿಷ್ಯದ ಕನಸುಗಳನ್ನು ಸಾಕಾರ ಗೊಳಿಸಬೇಕಾದ ವಿದ್ಯಾರ್ಥಿಗಳು ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಆಕರ್ಷಣೆಗೆ ಒಳಗಾಗದೆ ಅಧ್ಯಯನದತ್ತ ಹೆಚ್ಚಿನ ಗಮನ ಹರಿಸಬೇಕು. ಪಾಲಕರು ಕೂಡ ಮಕ್ಕಳಿಗೆ ಅಗತ್ಯವಿದ್ದಾಗ ಮಾತ್ರ ಮೊಬೈಲ್ ನೀಡಬೇಕು. ಮಕ್ಕಳ ಅಭಿರುಚಿ, ಹವ್ಯಾಸ ಹಾಗೂ ಚಟುವಟಿಕೆಗಳ ಬಗ್ಗೆ ನಿರಂತರವಾಗಿ ಗಮನಹರಿಸಿ, ಕಾಲಕಾಲಕ್ಕೆ ಶಾಲೆಗೆ ಭೇಟಿ ನೀಡಿ ಅವರ ಪ್ರಗತಿಯನ್ನು ಪರಿಶೀಲಿಸಬೇಕು ಎಂದು ಸಲಹೆ ನೀಡಿದರು. ಮಕ್ಕಳು ಪಾಲಕರ ಕನಸುಗಳ ಚಿಗುರುಗಳು. ಆ ಚಿಗುರುಗಳು ಬೃಹತ್ ವೃಕ್ಷಗಳಾಗಿ ಬೆಳೆಯಬೇಕಾದರೆ ಪಾಲಕರ ಮಾರ್ಗದರ್ಶನ ಮತ್ತು ಶಿಕ್ಷಕರ ಪ್ರೋತ್ಸಾಹ ಅಗತ್ಯ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲ ಅಭಿಜಿತ್ ಗಾಯಕವಾಡ ಮಾತನಾಡಿ, ಶಾಲೆಯ ನಿಯಮಗಳು, ವಿದ್ಯಾರ್ಥಿಗಳಲ್ಲಿ ಶಿಸ್ತು ಬೆಳೆಸುವ ಅಗತ್ಯತೆ ಹಾಗೂ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪಾಲಕರ ಜವಾಬ್ದಾರಿಗಳ ಕುರಿತು ವಿವರಿಸಿದರು. ಉಪ ಪ್ರಾಂಶುಪಾಲ ಜುಬೇರ ಸೈಯ್ಯದ ಅವರು ಸಿಬಿಎಸ್ಇ ಶಿಕ್ಷಣ ಪದ್ಧತಿ ಕಬ್ಬಿಣದ ಕಡಲೆಯಲ್ಲ, ಸರಿಯಾದ ಮಾರ್ಗದರ್ಶನ ಮತ್ತು ನಿರಂತರ ಅಭ್ಯಾಸದಿಂದ ವಿದ್ಯಾರ್ಥಿಗಳು ಯಶಸ್ಸಿನ ಶಿಖರ ತಲುಪಬಹುದು ಎಂಬುದನ್ನು ಸರಳವಾಗಿ ವಿವರಿಸಿದರು. ಶಿಕ್ಷಕಿ ಕು.ವೈಷ್ಣವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಶಿವಾಜಿ ಗಾಯಕವಾಡ, ಕಾರ್ಯದರ್ಶಿ ಶ್ರೀಮತಿ ರೀತಾ ಗಾಯಕವಾಡ, ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ವಿಜಯಕುಮಾರ ಸಾರವಾಡ, ಶಿಕ್ಷಕರ ಹಾಗೂ ಶಿಕ್ಷಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

ಶಿಕ್ಷಕರಾದ ಭೀಮರಾಯ ಕಡಿದಾಳ ಮತ್ತು ವಿಜಯಲಕ್ಷ್ಮಿ ಗಾಯಕವಾಡ ಕಾರ್ಯಕ್ರಮ ನಿರೂಪಿಸಿದರು. ಸಾವಿರಾರು ಪಾಲಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು.
