BELAGAVI

ಬಹುಕೋಟಿ ಶಿವಂ ಅಸೋಸಿಯೇಟ್ಸ್ ಹಗರಣ: ಸ್ಯಾಂಡಲ್‌ವುಡ್ ಸ್ಟಾರ್ಸ್‌ಗೆ ಸಿಐಡಿ ಬಿಗ್ ಶಾಕ್! ಡಾಲಿ ಧನಂಜಯ, ವಷಿಷ್ಠ ಸಿಂಹ ಸೇರಿ ಹಲವರಿಗೆ ನೋಟಿಸ್ ಸಾಧ್ಯತೆ

Share

ರಾಜ್ಯಾದ್ಯಂತ ತಲ್ಲಣ ಮೂಡಿಸಿರುವ ಬೆಳಗಾವಿಯ ಶಿವಂ ಅಸೋಸಿಯೇಟ್ಸ್ ಬಹುಕೋಟಿ ಠೇವಣಿ ವಂಚನೆ ಪ್ರಕರಣ ಇದೀಗ ಕನ್ನಡ ಚಿತ್ರರಂಗದ ಪ್ರಮುಖ ತಾರೆಯರ ಮನೆ ಬಾಗಿಲಿಗೆ ಬಂದು ತಲುಪಿದೆ. ವಂಚನೆ ಹಣದಲ್ಲಿ ನಡೆಸಲಾದ ಭವ್ಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಆರೋಪದ ಹಿನ್ನೆಲೆಯಲ್ಲಿ, ಸ್ಯಾಂಡಲ್‌ವುಡ್‌ನ ಖ್ಯಾತ ನಟರಾದ ಡಾಲಿ ಧನಂಜಯ, ವಶಿಷ್ಠ ಸಿಂಹ ಹಾಗೂ ನಟಿಯರಾದ ರಾಗಿಣಿ ದ್ವಿವೇದಿ, ಸಪ್ತಮಿ ಗೌಡ ಅವರಿಗೆ ನೋಟಿಸ್ ಜಾರಿ ಮಾಡಲು ಸಿಐಡಿ ಅಧಿಕಾರಿಗಳು ಮುಂದಾಗಿದ್ದಾರೆ.

ಸಾವಿರಾರು ಕೋಟಿ ರೂಪಾಯಿ ವಂಚನೆ ಆರೋಪ ಎದುರಿಸುತ್ತಿರುವ ಶಿವಂ ಅಸೋಸಿಯೇಟ್ಸ್ ಸಂಸ್ಥೆಯ ಮಾಲೀಕ ಶಿವಾನಂದ ನೀಲಣ್ಣವರ, ಹೂಡಿಕೆದಾರರಿಂದ ಸಂಗ್ರಹಿಸಿದ್ದ ಕೋಟ್ಯಂತರ ರೂಪಾಯಿ ಹಣವನ್ನು ಸಿನಿಮಾ ತಾರೆಯರ ಕಾರ್ಯಕ್ರಮಕ್ಕೆ ಬಳಸಿದ್ದಾನೆ ಎನ್ನುವ ಗಂಭೀರ ಅನುಮಾನ ತನಿಖೆ ವೇಳೆ ವ್ಯಕ್ತವಾಗಿದೆ. ಕಳೆದ ಡಿಸೆಂಬರ್ 27ರಂದು ಬೆಳಗಾವಿಯಲ್ಲಿ ಭರ್ಜರಿಯಾಗಿ ನಡೆದಿದ್ದ “ಕನ್ನಡದ ಉತ್ಸವ” ಕಾರ್ಯಕ್ರಮಕ್ಕೆ ಕೋಟಿ ಕೋಟಿ ಹಣ ಖರ್ಚು ಮಾಡಲಾಗಿದ್ದು, ಇದೀಗ ಈ ಉತ್ಸವವೇ ಸಿಐಡಿ ತನಿಖೆಯ ಕೇಂದ್ರಬಿಂದುವಾಗಿದೆ. ಅಂದು ಸಾವಿರಾರು ಜನರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆದಿದ್ದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸ್ಟಾರ್ ನಟ-ನಟಿಯರಿಗೆ ಸಂಭಾವನೆ ಹಾಗೂ ಇತರೆ ವೆಚ್ಚಗಳಿಗಾಗಿ ಹೂಡಿಕೆದಾರರ ಠೇವಣಿ ಹಣವನ್ನೇ ಬಳಸಲಾಗಿದೆಯೇ ಎಂಬ ಕುರಿತು ಮಾಹಿತಿ ಪಡೆಯಲು ಸಿಐಡಿ ನೋಟಿಸ್ ಜಾರಿ ಮಾಡುತ್ತಿದೆ.

ಹೆಚ್ಚಿನ ಬಡ್ಡಿ ಹಾಗೂ ಭಾರೀ ಲಾಭದ ಆಮಿಷ ಒಡ್ಡಿ ವಿವಿಧ ಜಿಲ್ಲೆ ಮತ್ತು ರಾಜ್ಯಗಳ ಸಾವಿರಾರು ಸಾರ್ವಜನಿಕರಿಂದ ಶಿವಂ ಅಸೋಸಿಯೇಟ್ಸ್ ಕೋಟ್ಯಂತರ ರೂಪಾಯಿ ಠೇವಣಿ ಸಂಗ್ರಹಿಸಿ ಕೈ ಎತ್ತಿತ್ತು. ಸದ್ಯ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಸಿಐಡಿ ಅಧಿಕಾರಿಗಳು, ಚಿತ್ರರಂಗದ ಜನಪ್ರಿಯ ನಟ-ನಟಿಯರನ್ನು ವಿಚಾರಣೆಗೆ ಒಳಪಡಿಸಲು ಸಜ್ಜಾಗಿದ್ದಾರೆ. ಸಿನಿಮಾ ತಾರೆಯರು ನೋಟಿಸ್ ಪಡೆದು ತನಿಖಾಧಿಕಾರಿಗಳ ಮುಂದೆ ಹಾಜರಾದ ಬಳಿಕ, ಈ ಬಹುಕೋಟಿ ವಂಚನೆ ಹಗರಣದ ಕರಾಳ ನೆರಳು ಚಿತ್ರರಂಗಕ್ಕೆ ಎಷ್ಟು ವ್ಯಾಪಿಸಿದೆ ಹಾಗೂ ಯಾರಿಗೆಲ್ಲಾ ಎಷ್ಟು ಹಣ ಸಂದಾಯವಾಗಿದೆ ಎನ್ನುವ ಮತ್ತಷ್ಟು ಸ್ಪೋಟಕ ಮಾಹಿತಿಗಳು ಹೊರಬೀಳುವ ಸಾಧ್ಯತೆ ಇದೆ.

Tags:

error: Content is protected !!