ಬಾಗಲಕೋಟೆ ಜಿಲ್ಲೆಯಾದ್ಯಂತ ವರುಣನ ಆರ್ಭಟ ಜೋರಾಗಿದ್ದು, ಬಿರುಗಾಳಿ ಸಹಿತ ಸುರಿದ ಭೀಕರ ಮಳೆಗೆ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಸುಮಾರು ಎರಡು ಗಂಟೆಗಳ ಕಾಲ ಸುರಿದ ಅಬ್ಬರದ ಮಳೆಗೆ ಪ್ರಮುಖ ರಸ್ತೆಗಳೆಲ್ಲವೂ ಸಂಪೂರ್ಣ ಜಲಾವೃತಗೊಂಡಿದ್ದು, ವಾಹನ ಸವಾರರು ಮತ್ತು ಸಾರ್ವಜನಿಕರು ತೀವ್ರ ಪರದಾಡುವಂತಾಗಿದೆ.

ಬಾಗಲಕೋಟೆ ಜಿಲ್ಲೆಯಾದ್ಯಂತ ಬಿರುಗಾಳಿ ಸಹಿತ ಸುರಿದ ಧಾರಾಕಾರ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಸುಮಾರು ಎರಡು ಗಂಟೆಗಳ ಕಾಲ ಸತತವಾಗಿ ಸುರಿದ ಭಾರಿ ಮಳೆಗೆ ನಗರದ ಪ್ರಮುಖ ರಸ್ತೆಗಳು ಜಲಾವೃತಗೊಂಡಿದ್ದು, ನವನಗರದ ಜಿಲ್ಲಾ ಕ್ರೀಡಾಂಗಣ ಹಾಗೂ ಎಸ್‌ಬಿಐ ಬ್ಯಾಂಕ್ ರಸ್ತೆಗಳು ಸಂಪೂರ್ಣ ಕೆರೆಯಂತಾಗಿ ಮಾರ್ಪಟ್ಟಿವೆ. ರಸ್ತೆಯ ಮೇಲೆ ಸುಮಾರು ಎರಡು ಅಡಿಯಷ್ಟು ನೀರು ಹರಿಯುತ್ತಿರುವುದರಿಂದ ಬೈಕ್ ಸವಾರರ ಸೈಲೆನ್ಸರ್‌ಗಳೊಳಗೆ ನೀರು ನುಗ್ಗಿ ವಾಹನಗಳು ಅರ್ಧ ರಸ್ತೆಯಲ್ಲೇ ಸ್ಥಗಿತಗೊಂಡು ಸವಾರರು ತೀವ್ರ ಪರದಾಟ ನಡೆಸಿದ್ದಾರೆ. ಇನ್ನು ಮಳೆಯ ಆರ್ಭಟ ಕೇವಲ ನಗರಕ್ಕೆ ಮಾತ್ರ ಸೀಮಿತವಾಗಿರದೆ ಗ್ರಾಮೀಣ ಭಾಗಕ್ಕೂ ತಟ್ಟಿದ್ದು, ಬಾದಾಮಿ ತಾಲೂಕಿನ ಕೆರಕಲಮಟ್ಟಿ ಗ್ರಾಮದಲ್ಲಿ ಬಿರುಗಾಳಿ ಸಹಿತ ಮಳೆಗೆ ಬಡವರ ಮನೆಗಳು ಸಂಪೂರ್ಣವಾಗಿ ಸೋರುತ್ತಿವೆ. ಹಠಾತ್ ಮುನ್ನುಗ್ಗಿದ ನೀರಿನಿಂದಾಗಿ ಗ್ರಾಮೀಣ ಭಾಗದಲ್ಲಿ ಅಪಾರ ಆಸ್ತಿಪಾಸ್ತಿ ಹಾನಿಯಾಗಿದ್ದು, ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

