: ಜನಪ್ರತಿನಿಧಿಗಳು ಕೇವಲ ರಾಜಕಾರಣಕ್ಕೆ ಮಾತ್ರ ಸೀಮಿತವಾಗಿರದೆ, ಬಡವರ ಕಣ್ಣೀರು ಒರೆಸುವ ಕೆಲಸ ಮಾಡಿದರೆ ಸಮಾಜಕ್ಕೆ ದೊಡ್ಡ ಶಕ್ತಿ ತುಂಬಿದಂತಾಗುತ್ತದೆ. ಇದಕ್ಕೆ ಸಾಕ್ಷಿಯಾಗಿದೆ ಖಾನಾಪುರದ ಚಾಪಗಾಂವ ಗ್ರಾಮದ ಒಂದು ಅಪರೂಪದ ಘಟನೆ. ಆರ್ಥಿಕ ಮುಗ್ಗಟ್ಟಿನಿಂದ ಕಂಗೆಟ್ಟಿದ್ದ ವಿದ್ಯಾರ್ಥಿನಿಗೆ ಮಾಜಿ ಶಾಸಕ ಅರವಿಂದ್ ಪಾಟೀಲ್ ಆಸರೆಯಾಗಿ ನಿಂತಿದ್ದು, ಜಿ.ಎನ್.ಎಂ ನರ್ಸಿಂಗ್ ಮುಗಿಸಿದ ಆ ಹೆಣ್ಣುಮಗಳು ಈಗ ಇಡೀ ಕುಟುಂಬದೊಂದಿಗೆ ಬಂದು ಮಾಜಿ ಶಾಸಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಖಾನಾಪೂರ ತಾಲೂಕಿನ ಚಾಪಗಾಂವ ಗ್ರಾಮದ ಬಡ ವಿದ್ಯಾರ್ಥಿನಿ ಶ್ವೇತಾ ರುದ್ರಪ್ಪ ಅಂಗಡಿ, ಆರ್ಥಿಕ ಸಂಕಷ್ಟದಿಂದಾಗಿ ತನ್ನ ಮುಂದಿನ ವಿದ್ಯಾಭ್ಯಾಸದ ಚಿಂತನೆಯಲ್ಲಿದ್ದಾಗ ಮಾಜಿ ಶಾಸಕ ಹಾಗೂ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಅರವಿಂದ್ ಪಾಟೀಲ್ ಅವರು ನೆರವು ನೀಡಿ ಆಸರೆಯಾಗಿದ್ದರು. ಇವರ ಈ ಧನಸಹಾಯದ ನೆರವಿನಿಂದಾಗಿ ಶ್ವೇತಾ ಅಂಗಡಿ ಯಶಸ್ವಿಯಾಗಿ ‘ಜಿ.ಎನ್.ಎಂ ನರ್ಸಿಂಗ್’ ಕೋರ್ಸ್ ಪೂರ್ಣಗೊಳಿಸಿದ್ದಾರೆ. ತನ್ನ ವೃತ್ತಿ ಜೀವನಕ್ಕೆ ದಾರಿ ದೀಪವಾಗಿ ಬಂದು ಪ್ರೋತ್ಸಾಹಿಸಿದ ಅರವಿಂದ್ ಪಾಟೀಲ್ ಅವರ ನಡೆ ಅನೇಕರಿಗೆ ಆತ್ಮ ಧೈರ್ಯ ಮೂಡಿಸುತ್ತದೆ ಎಂದು ಶ್ವೇತಾ ಹಾಗೂ ಅವರ ಕುಟುಂಬಸ್ಥರು ಮಾಜಿ ಶಾಸಕರ ನಿವಾಸಕ್ಕೆ ತೆರಳಿ ಶಾಲು ಹೊದಿಸಿ, ಮಾಲಾರ್ಪಣೆ ಮಾಡಿ ಸತ್ಕರಿಸಿ ಗೌರವಿಸಿದರು. ಕೃತಜ್ಞತೆ ಸಲ್ಲಿಸಿದ ಕುಟುಂಬಕ್ಕೆ ಮತ್ತೊಂದು ಸಿಹಿ ಸುದ್ದಿ ನೀಡಿದ ಅರವಿಂದ್ ಪಾಟೀಲರು, ಶ್ವೇತಾ ಅವರ ಮುಂದಿನ ಉನ್ನತ ಕೋರ್ಸ್ ವ್ಯಾಸಂಗಕ್ಕೂ ಸಹ ತಮ್ಮ ಕಡೆಯಿಂದ ಸಂಪೂರ್ಣ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡುವ ಮೂಲಕ ಮತ್ತೊಮ್ಮೆ ತಮ್ಮ ಉದಾರತೆಯನ್ನು ಮೆರೆದಿದ್ದಾರೆ.

