ಕಳೆದ ಕೆಲವು ದಿನಗಳಿಂದ ತೀವ್ರ ಬಿಸಿಲು ಮತ್ತು ಸೆಕೆಯಿಂದ ತತ್ತರಿಸಿಹೋಗಿದ್ದ ಚಿಕ್ಕೋಡಿ ನಗರ ಹಾಗೂ ಸುತ್ತಮುತ್ತಲಿನ ಭಾಗದ ಜನತೆಗೆ ಮಳೆರಾಯ ತಂಪು ಎರೆದಿದ್ದಾನೆ. ಇಂದು ದಿಢೀರನೆ ಅಪ್ಪಳಿಸಿದ ಧಾರಾಕಾರ ಮಳೆಗೆ ಇಡೀ ನಗರವೇ ಸಂಪೂರ್ಣವಾಗಿ ತಂಪಾಗಿದ್ದು, ವಾತಾವರಣದಲ್ಲಿ ಹಿತಕರವಾದ ತಂಗಾಳಿ ಬೀಸುತ್ತಿದೆ.

ಮಳೆಯ ಆರ್ಭಟ ಎಷ್ಟಿತ್ತೆಂದರೆ ನಗರದ ಪ್ರಮುಖ ರಸ್ತೆಗಳು ಹಾಗೂ ಚರಂಡಿಗಳು ಮಳೆನೀರಿನಿಂದ ತುಂಬಿ ಹರಿದವು. ಕೆಲವೇ ಗಂಟೆಗಳಲ್ಲಿ ಸುರಿದ ಭಾರಿ ಮಳೆಗೆ ವಾಹನ ಸವಾರರು ಮತ್ತು ಪಾದಚಾರಿಗಳು ಪರದಾಡುವಂತಾಯಿತು.ಬಸ್ ನಿಲ್ದಾಣ,ಇಂದಿರಾನಗರ,ಬಸವ ವೃತ್ತ,ಅಂಕಲಿ ಕೂಟ ಮೊದಲಾದ ಪ್ರಮುಖ ಪ್ರದೇಶಗಳಲ್ಲಿ ಭಾರಿ ಮಳೆಯಾಗಿದ್ದು, ಸಾರ್ವಜನಿಕರು ಮಳೆಯ ಆನಂದವನ್ನು ಸವಿದರು. ಬಸ್ ನಿಲ್ದಾಣ ಹಾಗೂ ಅಂಕಲಿ ಕೂಟದಂತಹ ಸದಾ ಜನನಿಬಿಡ ಪ್ರದೇಶಗಳಲ್ಲಿ ಜನ ಆಶ್ರಯಕ್ಕಾಗಿ ಅಂಗಡಿ ಮುಂಗಟ್ಟುಗಳತ್ತ ಧಾವಿಸಬೇಕಾಯಿತು.

ಒಟ್ಟಾರೆಯಾಗಿ, ಈ ದಿಢೀರ್ ಮಳೆ ಸಾರ್ವಜನಿಕ ಸಂಚಾರಕ್ಕೆ ಕೊಂಚ ಅಡ್ಡಿ ಉಂಟುಮಾಡಿದರೂ, ಸುಡುಬಿಸಿಲಿನಿಂದ ಕಂಗಾಲಾಗಿದ್ದ ಚಿಕ್ಕೋಡಿಯ ಜನತೆಗೆ ಸದ್ಯಕ್ಕಂತೂ ದೊಡ್ಡ ಮಟ್ಟದ ಸಮಾಧಾನ ತಂದಿದೆ.
