Belagavi

ಮನೆಗೆಲಸದ ಮಹಿಳೆಯಿಂದಲೇ ಕಳವು; 17.49 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡ APMC ಪೊಲೀಸರು!

Share

ನಂಬಿ ಮನೆಗೆಲಸಕ್ಕೆ ಇಟ್ಟುಕೊಂಡ ಮಹಿಳೆಯೊಬ್ಬಳು ಮಾಲೀಕರ ಮನೆಯಲ್ಲೇ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿರುವ ಘಟನೆ ಬೆಳಗಾವಿಯಲ್ಲಿ ಬೆಳಕಿಗೆ ಬಂದಿದೆ. ಪ್ರಕರಣವನ್ನು ಅತ್ಯಂತ ಚಾಣಾಕ್ಷತನದಿಂದ ಭೇದಿಸಿರುವ ಬೆಳಗಾವಿ ನಗರದ APMC ಠಾಣೆಯ ಪೊಲೀಸರು, ಆರೋಪಿತೆಯನ್ನು ಬಂಧಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ಬೆಳಗಾವಿ ನಗರದ ಸಂಗಮೇಶ್ವರ ನಗರದ ನಿವಾಸಿಯಾದ ಮೀನಾ ಲಾಲ್‌ಚಂದ್ ಚವ್ಹಾಣ್ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಗಂಗವ್ವ ರಮೇಶ್ ರಾಠೋಡ್ ಎಂಬ ಮಹಿಳೆ ಚಿನ್ನಾಭರಣಗಳನ್ನು ಕಳವು ಮಾಡಿದ್ದಾಳೆ. ಈ ಕುರಿತು ಸಂಶಯದ ಮೇರೆಗೆ ಈಶ್ವರ್ ವೆಂಕಟೇಶ್ ಎಂಬುವವರು ನೀಡಿದ ದೂರಿನನ್ವಯ APMC ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ-2023 ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯಪ್ರವೃತ್ತರಾದ APMC ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ ಯು.ಎಸ್. ಆವಟಿ ಅವರ ನೇತೃತ್ವದ ತಂಡವು ಜೂನ್ 02, 2026 ರಂದು ಆರೋಪಿತೆಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿತು. ಪೊಲೀಸರ ತೀವ್ರ ವಿಚಾರಣೆಯ ಬಳಿಕ ಆರೋಪಿ ಗಂಗವ್ವ ತಾನು ಮಾಡಿದ ಕಳವು ಕೃತ್ಯವನ್ನು ಒಪ್ಪಿಕೊಂಡಿದ್ದಾಳೆ. ಬಂಧಿತಳಿಂದ ಸುಮಾರು 17,49,567/- ರೂ. ಕಿಮ್ಮತ್ತಿನ ಒಟ್ಟು 119.050 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ಪೊಲೀಸರು ಯಶಸ್ವಿಯಾಗಿ ವಶಪಡಿಸಿಕೊಂಡಿದ್ದಾರೆ. ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಎಮ್. ಎ. ಪಾಟೀಲ, ಎನ್.ಎಸ್.ಐ ಹಾಗೂ ಸಿಬ್ಬಂದಿಗಳಾದ ಡಿ.ಸಿ.ಸಾಗರ, ಬಸವರಾಜ ನರಗುಂದ ಸೇರಿದಂತೆ ಇಡೀ ತಂಡದ ಶ್ಲಾಘನೀಯ ಕೆಲಸವನ್ನು ಬೆಳಗಾವಿ ನಗರದ ಮಾನ್ಯ ಪೊಲೀಸ್ ಆಯುಕ್ತರು ಮತ್ತು ಉಪ ಆಯುಕ್ತರು ಮುಕ್ತ ಕಂಠದಿಂದ ಪ್ರಶಂಸಿಸಿದ್ದಾರೆ.

Tags:

error: Content is protected !!