ಮನೆಯಲ್ಲಿ ಕೆಲಸಕ್ಕೆ ಹಾಗೂ ರಿಪೇರಿಗೆಂದು ಕೊಟ್ಟಿದ್ದ ಗಟ್ಟಿ ಬಂಗಾರ ಮತ್ತು ಚಿನ್ನದ ಹಾರವನ್ನು ಮಾಲೀಕರಿಗೆ ತಿಳಿಸದೆ ಎಸ್ಕೇಪ್ ಆಗಿದ್ದ ಖತರ್ನಾಕ್ ಪತ್ತಾರನನ್ನು ಬೆಳಗಾವಿಯ ಶಹಾಪೂರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಬರೋಬ್ಬರಿ 15.73 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸ್ ತಂಡ ಯಶಸ್ವಿಯಾಗಿದೆ.
ಬೆಳಗಾವಿ ನಗರದ ಶಹಾಪೂರ ಪೊಲೀಸ್ ಠಾಣಾ ವ್ಯಾಪ್ತಿಯ ನಾರ್ವೇಕರ ಗಲ್ಲಿಯ ಫಿರ್ಯಾದಿದಾರರ ಮನೆಯಲ್ಲಿ ಈ ನಂಬಿಕೆ ದ್ರೋಹದ ಘಟನೆ ನಡೆದಿದ್ದು, ಈ ಸಂಬಂಧ ಅಪರಾಧ ಸಂಖ್ಯೆ 63/2026 ಕಲಂ: 316(2) ಬಿ.ಎನ್.ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಶಹಾಪೂರ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ, ಮೂಲತಃ ಆಂಧ್ರಪ್ರದೇಶದ ವಿಜಯವಾಡದ ನಿವಾಸಿಯಾಗಿದ್ದು, ಸದ್ಯ ಬೆಳಗಾವಿಯ ಆಯುರ್ವೇದಿಕ್ ಕಾಲೇಜ್ ಹತ್ತಿರ ವಾಸವಿದ್ದ ಕೃಷ್ಣಾ ಮೋಹನ ಮೈತಿ (36) ಎಂಬ ಆರೋಪಿತ ಬಂಧಿಸಿದ್ದಾರೆ. ಆರೋಪಿತನಿಂದ ಒಟ್ಟು 103.97 ಗ್ರಾಂ ತೂಕದ, ಅಂದಾಜು 15,73,370/- ರೂ. ಕಿಮ್ಮತ್ತಿನ ಗಟ್ಟಿ ಬಂಗಾರ ಮತ್ತು ಬಂಗಾರದ ಹಾರವನ್ನು ವಶಪಡಿಸಿಕೊಳ್ಳಲಾಗಿದೆ. ಮಾನ್ಯ ಪೊಲೀಸ್ ಆಯುಕ್ತರು, ಉಪ-ಪೊಲೀಸ್ ಆಯುಕ್ತರು (ಕಾ&ಸು), ಉಪ-ಪೊಲೀಸ್ ಆಯುಕ್ತರು (ಅ&ಸಂ) ಹಾಗೂ ಸಹಾಯಕ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಶಹಾಪೂರ ಠಾಣೆಯ ಇನ್ಸ್‌ಪೆಕ್ಟರ್ ಎಸ್.ಎಸ್. ಸಿಮಾನಿ, ಪಿ.ಎಸ್.ಐ ಮಣಿಕಂಠ ಪೂಜಾರಿ, ಮಹಿಳಾ ಪಿ.ಎಸ್.ಐ ಎಸ್.ಎನ್. ಬಸ್ಟಾ ಹಾಗೂ ಸಿಬ್ಬಂದಿಗಳಾದ ಗಜಾನನ ಶಿರಸಂಗಿ, ಶಂಕರ ಗುಡಗೊಳ, ಶ್ರೀಧರ ತಳವಾರ, ಅಜೀತ ಶಿಪೂರೆ, ಶಿವರಾಜ ಪಚ್ಚನ್ನವರ, ರಂಗ ಭಸ್ಯೆ ಮತ್ತು ತಾಂತ್ರಿಕ ವಿಭಾಗದ ರಮೇಶ ಅಕ್ಕಿ ಹಾಗೂ ಮಹಾದೇವ ಕಾಸೀದ ಅವರು ಶ್ಲಾಘನೀಯ ಕಾರ್ಯ ಮಾಡಿದ್ದು, ಇಡೀ ತಂಡದ ಯಶಸ್ಸನ್ನು ಪೊಲೀಸ್ ಆಯುಕ್ತರು ಪ್ರಶಂಸಿಸಿದ್ದಾರೆ

