BELAGAVI

ಸಾವಗಾಂವ ಮರಾಠಿ ಶಾಲೆ ವಿವಾದ: ಸ್ಥಳಕ್ಕೆ ಬಿಇಒ ಭೇಟಿ, ಸಾರ್ವಜನಿಕರ ಆಕ್ರೋಶಕ್ಕೆ ಮಣಿದು ಪರ್ಯಾಯ ವ್ಯವಸ್ಥೆಯ ಭರವಸೆ

Share

ಬೆಳಗಾವಿ ತಾಲೂಕಿನ ಸಾವಗಾಂವನ ಮರಾಠಿ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಮಾಧ್ಯಮದ ಶಾಲೆ ಆರಂಭಿಸುವ ಸರ್ಕಾರದ ನಿರ್ಧಾರಕ್ಕೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿ ಪರ್ಯಾಯ ಜಾಗದಲ್ಲಿ ಕನ್ನಡ ಶಾಲೆ ನಡೆಸಲು ಸಮ್ಮತಿಸಿದ್ದಾರೆ.

ಬೆಳಗಾವಿ ತಾಲೂಕಿನ ಸಾವಗಾಂವನ ಮರಾಠಿ ಶಾಲೆಯಲ್ಲಿ ಕನ್ನಡ ಮಾಧ್ಯಮ ತರಗತಿಗಳನ್ನು ಆರಂಭಿಸುವ ಪ್ರಸ್ತಾಪಕ್ಕೆ ಮರಾಠಿ ಭಾಷಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ಬೃಹತ್ ಪ್ರತಿಭಟನಾ ಮನವಿ ಸಲ್ಲಿಸಲು ನಿರ್ಧರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ವಾತಾವರಣ ಹದಗೆಡುವುದನ್ನು ತಡೆಯಲು ಬೆಳಗಾವಿ ಬಿಇಒ ದಾನ್ನಮ್ಮ ಜಾಳಕಿ ಅವರು ನೇರವಾಗಿ ಸಾವಗಾಂವ ಶಾಲೆಗೆ ಭೇಟಿ ನೀಡಿ ಸಾರ್ವಜನಿಕರೊಂದಿಗೆ ಚರ್ಚಿಸಿದರು. ಕನ್ನಡ ಶಾಲೆಗೆ ಪರ್ಯಾಯ ವ್ಯವಸ್ಥೆ ಮಾಡಲು ಒಂದು ತಿಂಗಳ ಕಾಲಾವಕಾಶ ನೀಡುವಂತೆ ಬಿಇಒ ವಿನಂತಿಸಿದಾಗ, ಶಾಲಾ ಸುಧಾರಣಾ ಸಮಿತಿ ಹಾಗೂ ಗ್ರಾಮಸ್ಥರು ಹಳೆಯ ಶಾಲಾ ಕಟ್ಟಡವನ್ನು ಸ್ವಚ್ಛಗೊಳಿಸಿ ಬಳಸಿಕೊಳ್ಳುವಂತೆ ಅಥವಾ ದುರಸ್ತಿಯಾಗುವವರೆಗೆ ತಾವೇ ಸ್ವಂತ ಖರ್ಚಿನಲ್ಲಿ ಬಾಡಿಗೆ ರೂಮ್ ಪಡೆದು ಕೊಡುವುದಾಗಿ ತಿಳಿಸಿದರು.

ಯಾವುದೇ ಕಾರಣಕ್ಕೂ ಮರಾಠಿ ಶಾಲೆಯಲ್ಲಿ ಕನ್ನಡ ಮಾಧ್ಯಮ ಆರಂಭಿಸದಂತೆ ಪಟ್ಟು ಹಿಡಿದ ಗ್ರಾಮಸ್ಥರ ಈ ಪ್ರಸ್ತಾಪಕ್ಕೆ ಒಪ್ಪಿದ ಬಿಇಒ, ಪರ್ಯಾಯ ಜಾಗ ಹುಡುಕಿ ಅಲ್ಲಿ ಕನ್ನಡ ಶಾಲೆ ನಡೆಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಸಾಗರ್ ಸಾಗಾಂವಕರ್, ಇಸಿಒ ಬಡಿಗೇರ್, ಕ್ಲಸ್ಟರ್ ಪ್ರಮುಖ್ ಸತೀಶ್ ಪಾಟೀಲ್, ಮುಖ್ಯಾಧ್ಯಾಪಕ ಎಲ್.ಎಸ್. ಚಾಂದಿಲ್ಕರ್ ಹಾಗೂ ಗಡಿಭಾಗದ ಯುವ ಸಮಿತಿ ಅಧ್ಯಕ್ಷ ಶುಭಂ ಶೆಳಕೆ ಸೇರಿದಂತೆ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು.

Tags:

error: Content is protected !!