ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ವಿದ್ಯಾರ್ಥಿಗಳಿಗೆ ಕೇಸರಿ ಶಾಲು ವಿತರಿಸಲು ಮುಂದಾಗಿದ್ದ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪೊಲೀಸರು ವಶಕ್ಕೆ ಪಡೆದ ಘಟನೆಗೆ ಸಂಬಂಧಿಸಿದಂತೆ ಯತ್ನಾಳ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಹಿಜಾಬ್ಗೆ ಅವಕಾಶ ನೀಡುವುದಾದರೆ ಕೇಸರಿ ಶಾಲಿಗೂ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು. ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಶಾಲಾ-ಕಾಲೇಜುಗಳಲ್ಲಿ ಶಿಸ್ತಿನ ಪ್ರತೀಕವಾಗಿ ಸಮವಸ್ತ್ರ ವ್ಯವಸ್ಥೆ ಜಾರಿಯಲ್ಲಿದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಆಡಳಿತದ ಕೊನೆಯ ಅವಧಿಯಲ್ಲಿ ಹಿಜಾಬ್ ಧರಿಸಲು ಅನುಮತಿ ನೀಡಿದ್ದಾರೆ ಎಂದು ಆರೋಪಿಸಿದರು.

ಹಿಜಾಬ್ ಕುರಿತ ಆದೇಶ ಹೊರಬಿದ್ದ ಸಂದರ್ಭದಲ್ಲೇ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಲು ಹಾಗೂ ಹಣೆಗೆ ಕೇಸರಿ ತಿಲಕ ಹಚ್ಚಿಕೊಳ್ಳಲು ಅವಕಾಶ ನೀಡಬೇಕು ಎಂದು ಹೇಳಲಾಗಿತ್ತು. ಸರ್ಕಾರ ತನ್ನ ಆದೇಶವನ್ನು ವಾಪಸ್ ಪಡೆಯಬೇಕು ಎಂಬ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಕೇಸರಿ ಶಾಲು ವಿತರಿಸಲು ಮುಂದಾಗಿದ್ದೆವು. ಆದರೆ ನಾವು ಸ್ಥಳಕ್ಕೆ ತಲುಪುತ್ತಿದ್ದಂತೆಯೇ ಪೊಲೀಸರು ಬಂಧಿಸಿದ್ದಾರೆ ಎಂದು ದೂರಿದರು. ತಮ್ಮನ್ನು ಅಪರಾಧಿಗಳಂತೆ ನಡೆಸಿಕೊಂಡಿರುವುದಾಗಿ ಆರೋಪಿಸಿದ ಯತ್ನಾಳ್, ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಕಿಡಿಕಾರಿದರು. ನಾವು ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದೆವು. ರಾಜ್ಯದಲ್ಲಿ ಕೇಸರಿ ಶಾಲು ಧರಿಸುವುದು ಅಥವಾ ಕುಂಕುಮ ಇಡುವುದು ಅಪರಾಧವೇ ಎಂದು ಪ್ರಶ್ನಿಸಿದರು.
ಮುಂದುವರಿದು ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಇದೇ ರೀತಿಯ ನೀತಿಯನ್ನು ಮುಂದುವರಿಸಿದರೆ ಪಶ್ಚಿಮ ಬಂಗಾಳದಂತೆ ಕರ್ನಾಟಕದ ಲ್ಲಿಯೂ ಪಕ್ಷಕ್ಕೆ ಜನರು ತಕ್ಕ ಉತ್ತರ ನೀಡಲಿದ್ದಾರೆ. 2028ರ ಚುನಾವಣೆಯಲ್ಲಿ ಕಾಂಗ್ರೆಸ್ ಧೂಳಿಪಟವಾಗಲಿದೆ ಎಂದು ಭವಿಷ್ಯ ನುಡಿದರು. ಇಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನವೇ ನಡೆಯುತ್ತದೆ. ಯಾವುದೇ ವ್ಯಕ್ತಿ ಅಥವಾ ಪಕ್ಷದ ಸಂವಿಧಾನ ನಡೆಯುವುದಿಲ್ಲ ಎಂದು ಹೇಳಿದ ಯತ್ನಾಳ್, ಮುಸ್ಲಿಂ ತುಷ್ಟೀಕರಣದ ರಾಜಕಾರಣವನ್ನು ಸಹಿಸಲಾಗುವುದಿಲ್ಲ ಎಂದು ಆರೋಪಿಸಿದರು. ಹಿಂದೂಗಳ ಹೋರಾಟಗಳು, ಆರ್ಎಸ್ಎಸ್ ಚಟುವಟಿಕೆಗಳು ಹಾಗೂ ಹಿಂದೂಪರ ಧಾರ್ಮಿಕ ಕಾರ್ಯಕ್ರಮಗಳಿಗೆ ತೊಂದರೆ ನೀಡಿದರೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಿದ ಅವರು, ಅಗತ್ಯವಿದ್ದರೆ ಜೈಲಿಗೆ ಹೋಗಲೂ ಸಿದ್ಧರಾಗಿದ್ದೇವೆ ಎಂದರು.

ಇದೇ ವೇಳೆ ವಿದ್ಯಾರ್ಥಿಗಳಿಗೆ ಕರೆ ನೀಡಿದ ಯತ್ನಾಳ್, ಎಲ್ಲರೂ ಸ್ವಯಂಪ್ರೇರಿತರಾಗಿ ಕೇಸರಿ ಶಾಲು ಧರಿಸಿ ಶಾಲಾ-ಕಾಲೇಜುಗಳಿಗೆ ತೆರಳಬೇಕು ಎಂದು ಮನವಿ ಮಾಡಿದರು. ಹಿಜಾಬ್ ಸಂಬಂಧಿತ ಆದೇಶವನ್ನು ಸರ್ಕಾರ ವಾಪಸ್ ಪಡೆಯುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಕೆ ನೀಡಿದರು.
