ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವಿಜಯಪುರ ನಗರದ ಶಿಕ್ಷಣ ಸಂಸ್ಥೆ ಛತ್ರಪತಿ ಶಿವಾಜಿ ಮಹಾರಾಜ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ರವೀಂದ್ರನಾಥ ಠಾಗೋರ್ ಸಿಬಿಎಸ್ಇ ಶಾಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪರಿಸರ ಸಂರಕ್ಷಣೆಯ ಸಂಕಲ್ಪ ಕೈಗೊಂಡರು. ಶಾಲಾ ಆವರಣದಲ್ಲಿ 150 ಸಸಿಗಳನ್ನು ನೆಟ್ಟು ಪರಿಸರ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಕುರಿತು ಇಲ್ಲಿದೆ ಒಂದು ವರದಿ…. ಇಂದು ವಿಶ್ವ ಪರಿಸರ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಶಿವಾಜಿ ಗಾಯಕವಾಡ ಅವರು ತೆಂಗಿನ ಸಸಿ ನೆಡುವ ಮೂಲಕ 150 ಸಸಿಗಳ ನೆಡುವ ಅಭಿಯಾನಕ್ಕೆ ಚಾಲನೆ ನೀಡಿದರು. ಬಳಿಕ ಶಾಲಾ ಆವರಣ ಮತ್ತು ಮೈದಾನದಲ್ಲಿ ವಿವಿಧ ಜಾತಿಯ ಹಣ್ಣಿನ, ನೆರಳು ನೀಡುವ ಹಾಗೂ ಔಷಧೀಯ ಸಸಿಗಳನ್ನು ನೆಡಲಾಯಿತು.


ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಪ್ರಾಂಶುಪಾಲ ಅಭಿಜಿತ್ ಗಾಯಕವಾಡ ಅವರು, ಪರಿಸರ ಸಂರಕ್ಷಣೆ ಇಂದಿನ ಅಗತ್ಯವಾಗಿದ್ದು ಪ್ರತಿಯೊಬ್ಬರೂ ಕನಿಷ್ಠ ಒಂದು ಗಿಡ ನೆಟ್ಟು ಅದನ್ನು ಪೋಷಿಸುವ ಜವಾಬ್ದಾರಿ ವಹಿಸಬೇಕು ಎಂದು ತಿಳಿಸಿದರು. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ತಾಪಮಾನ, ಅರಣ್ಯ ನಾಶ ಹಾಗೂ ಪರಿಸರ ಮಾಲಿನ್ಯ ಮಾನವ ಜೀವನಕ್ಕೆ ದೊಡ್ಡ ಸವಾಲಾಗಿ ಪರಿಣಮಿಸುತ್ತಿದ್ದು, ಪ್ರಕೃತಿಯ ಸಮತೋಲನ ಕಾಪಾಡಲು ಮರಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು. ಇನ್ನೂ ಕಾರ್ಯಕ್ರಮ ದಲ್ಲಿ ವಿದ್ಯಾರ್ಥಿಗಳಿಗೆ ಪರಿಸರದ ಮಹತ್ವ, ಹವಾಮಾನ ಬದಲಾವಣೆ, ಜಲ ಸಂರಕ್ಷಣೆ ಹಾಗೂ ವೃಕ್ಷಾರೋಪಣೆಯ ಅಗತ್ಯತೆ ಕುರಿತು ಅರಿವು ಮೂಡಿಸಲಾಯಿತು. ಹಲವಾರು ವಿದ್ಯಾರ್ಥಿಗಳು ತಮ್ಮ ಮನೆಗಳಿಂದ ಸಸಿಗಳನ್ನು ತಂದು ಶಾಲೆಗೆ ಕಾಣಿಕೆಯಾಗಿ ನೀಡಿ ಪರಿಸರದ ಬಗ್ಗೆ ತಮ್ಮ ಕಾಳಜಿ ಮತ್ತು ಬದ್ಧತೆಯನ್ನು ಪ್ರದರ್ಶಿಸಿದರು.


ಶಾಲೆಯ ವಿಶಾಲ ಮೈದಾನದಲ್ಲಿ ನೆಡಲಾದ 150 ಸಸಿಗಳನ್ನು ಸಂರಕ್ಷಿಸಿ ಬೆಳೆಸುವ ಸಂಕಲ್ಪವನ್ನು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಆಡಳಿತ ಮಂಡಳಿ ಕೈಗೊಂಡರು. ಪ್ರತಿಯೊಂದು ಸಸಿಯ ಜವಾಬ್ದಾರಿಯನ್ನು ವಿದ್ಯಾರ್ಥಿಗಳಿಗೆ ವಹಿಸುವ ಮೂಲಕ ಅವುಗಳ ಆರೈಕೆ ಮಾಡುವಂತೆ ಸೂಚಿಸಲಾಯಿತು.ಕಾರ್ಯಕ್ರಮದಲ್ಲಿ ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ “ಒಬ್ಬ ವಿದ್ಯಾರ್ಥಿ – ಒಂದು ಗಿಡ” ಎಂಬ ಸಂದೇಶದೊಂದಿಗೆ ಪರಿಸರ ಸಂರಕ್ಷಣೆಯ ಪ್ರತಿಜ್ಞೆ ಸ್ವೀಕರಿಸಿದರು ಒಟ್ಟಾರೆ, ವಿಶ್ವ ಪರಿಸರ ದಿನಾಚರಣೆ ಕೇವಲ ಆಚರಣೆಗೆ ಸೀಮಿತವಾಗದೆ, ಪ್ರಕೃತಿಯ ಉಳಿವಿಗಾಗಿ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂಬ ಸಂದೇಶವನ್ನು ಈ ಕಾರ್ಯಕ್ರಮದ ಮೂಲಕ ಶಾಲೆ ಸಮಾಜಕ್ಕೆ ಸಾರಿತು.
