Bagalkot

ಒಂದೆಡೇ ಇಳಕಲ್‌ನಲ್ಲಿ ಜೀವಜಲಕ್ಕಾಗಿ ಜನರ ಹಾಹಾಕಾರ: ಮತ್ತೊಂದೆಡೇ ಶಾಸಕ ಕಾಶಪ್ಪನವರ್ ಸಚಿವ ಸ್ಥಾನಕ್ಕಾಗಿ ಬೆಂಗಳೂರಿನಲ್ಲಿ ಲಾಬಿ!

Share

• ಇಳಕಲ್ ನಗರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ
• ಖಾಲಿ ಕೊಡಗಳೊಂದಿಗೆ ನಗರಸಭೆಗೆ ಮಹಿಳೆಯರ ಮುತ್ತಿಗೆ
• ಕಳೆದ 15 ದಿನಗಳಿಂದ ನಿಂತ ನೀರು
• ಬೆಂಗಳೂರಿನಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ್ ಲಾಬಿ

ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದಲ್ಲಿ ಕುಡಿಯುವ ನೀರಿಗಾಗಿ ಜನಸಾಮಾನ್ಯರು, ಅದರಲ್ಲೂ ವಿಶೇಷವಾಗಿ ಮಹಿಳೆಯರು ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಒಂದು ಕಡೆ ಬಿರು ಬೇಸಿಗೆಯ ಧಗಧಗಿಸುವ ಬಿಸಿಲಿಗೆ ಜೀವಜಲ ಸಿಗದೇ ಜನ ತತ್ತರಿಸುತ್ತಿದ್ದರೆ, ಇತ್ತ ಕ್ಷೇತ್ರದ ಶಾಸಕರಾದ ವಿಜಯಾನಂದ ಕಾಶಪ್ಪನವರ್ ಅವರು ಸಚಿವ ಸಂಪುಟ ಸೇರ್ಪಡೆಗಾಗಿ ಬೆಂಗಳೂರಿನಲ್ಲಿ ಹೈಕಮಾಂಡ್ ಮಟ್ಟದಲ್ಲಿ ಲಾಬಿ ನಡೆಸುತ್ತಿದ್ದಾರೆ. ಶಾಸಕರು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ಆಕ್ರೋಶದ ಕಟ್ಟೆ ಒಡೆದಿದ್ದು, ನಗರಸಭೆಗೆ ಮುತ್ತಿಗೆ ಹಾಕಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದ ವಾರ್ಡ್ ನಂಬರ್ 3 ಸೇರಿದಂತೆ ಹಲವು ವಾರ್ಡ್‌ಗಳಲ್ಲಿ ಕಳೆದ 15 ದಿನಗಳಿಂದ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾಗದ ಹಿನ್ನೆಲೆಯಲ್ಲಿ ಸಾರ್ವಜನಿಕರು ರೊಚ್ಚಿಗೆದ್ದಿದ್ದಾರೆ. ಬಿರು ಬೇಸಿಗೆಯ ಈ ದಿನಗಳಲ್ಲಿ ಕನಿಷ್ಠ ಕುಡಿಯುವ ನೀರಿಗೂ ಆಶ್ರಯವಿಲ್ಲದೇ ಕಂಗಾಲಾದ ಇಳಕಲ್ ನಗರದ ನೂರಾರು ಮಹಿಳೆಯರು ಖಾಲಿ ಕೊಡಗಳನ್ನು ಹಿಡಿದು ರಸ್ತೆಗಿಳಿದು ಬೃಹತ್ ಪ್ರತಿಭಟನೆ ನಡೆಸಿದರು. ತಮಗೆ ಸೂಕ್ತ ಸ್ಪಂದನೆ ಸಿಗದ ಕಾರಣ ನೇರವಾಗಿ ಇಳಕಲ್ ನಗರಸಭೆ ಕಚೇರಿಗೆ ಮುತ್ತಿಗೆ ಹಾಕಿ, ಕಚೇರಿಯನ್ನು ಬಂದ್ ಮಾಡಿ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು. ಈ ವೇಳೆ ಸಾರ್ವಜನಿಕರು ಹಾಗೂ ನಗರಸಭೆಯ ಸಿಬ್ಬಂದಿ ನಡುವೆ ತೀವ್ರ ವಾಗ್ವಾದ ಹಾಗೂ ತಳ್ಳಾಟ-ನೂಕಾಟಗಳು ಸಹ ನಡೆದವು. ಸುಮಾರು ಒಂದು ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಇಳಕಲ್ ನಗರದ ಜನರಿಗೆ ಕನಿಷ್ಠ ಮೂಲಭೂತ ಸೌಕರ್ಯ ಒದಗಿಸಲು ವಿಫಲವಾದ ಜಿಲ್ಲಾಡಳಿತ ಮತ್ತು ನಗರಸಭೆಯ ವಿರುದ್ಧ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.

ಇಳಕಲ್ ನಗರದಲ್ಲಿ ಕಳೆದ ಎರಡು ವರ್ಷಗಳಿಂದಲೂ ಈ ಕುಡಿಯುವ ನೀರಿನ ಸಮಸ್ಯೆ ನಿರಂತರವಾಗಿ ಕಾಡುತ್ತಿದ್ದರೂ, ಸ್ಥಳೀಯ ಅಧಿಕಾರಿಗಳಾಗಲಿ ಅಥವಾ ಶಾಸಕರಾಗಲಿ ಇದಕ್ಕೆ ಯಾವುದೇ ಶಾಶ್ವತ ಪರಿಹಾರ ಕಂಡುಕೊಂಡಿಲ್ಲ. ನೀರಿನ ಸಮಸ್ಯೆ ಉಲ್ಬಣಗೊಂಡಾಗಲೆಲ್ಲಾ ಸಾರ್ವಜನಿಕರು ಹತ್ತಾರು ಬಾರಿ ಬೀದಿಗಿಳಿದು ಹೋರಾಟ, ಮುತ್ತಿಗೆ ಹಾಗೂ ರಸ್ತೆ ಬಂದ್ ಪ್ರತಿಭಟನೆಗಳನ್ನು ನಡೆಸುತ್ತಲೇ ಬಂದಿದ್ದಾರೆ. ಈ ಹಿಂದೆ ಜನತೆ ಶಾಸಕರ ಮನೆಗೂ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ, ಇಷ್ಟೆಲ್ಲಾ ಆದರೂ ಕುಡಿಯುವ ನೀರಿಗಾಗಿ ಕೋಟಿ ಕೋಟಿ ರೂಪಾಯಿ ವ್ಯಯಿಸುವ ಸರ್ಕಾರದ ಯೋಜನೆಗಳು ಎಲ್ಲಿ ಹೋಗುತ್ತಿವೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಸದ್ಯ ಕ್ಷೇತ್ರದಲ್ಲಿ ಇಂತಹ ಭೀಕರ ಪರಿಸ್ಥಿತಿ ಇದ್ದರೂ, ಹುನಗುಂದ ಕ್ಷೇತ್ರದ ಶಾಸಕ ವಿಜಯಾನಂದ ಕಾಶಪ್ಪನವರ್ ಅವರು ಕ್ಷೇತ್ರದ ಜನರ ನಿತ್ಯ ಗೋಳನ್ನು ಕೇಳುವ ಬದಲು, ಸಚಿವ ಸಂಪುಟ ಸೇರ್ಪಡೆಗಾಗಿ ಬೆಂಗಳೂರಿನಲ್ಲಿ ಬೀಡು ಬಿಟ್ಟು ರಾಜಕೀಯ ಲಾಬಿಯಲ್ಲಿ ಬ್ಯುಸಿಯಾಗಿರುವುದು ಇಳಕಲ್ ನಗರದ ಜನತೆಯ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿದೆ.

 

Tags:

error: Content is protected !!