ತಾನು ನಿತ್ಯ ಪೂಜಿಸುವ, ಭಕ್ತರು ಶ್ರದ್ಧೆಯಿಂದ ಕೈಮುಗಿಯುವ ದೇವರನ್ನೇ ಅರ್ಚಕನೊಬ್ಬ ದರೋಡೆ ಮಾಡಿರುವ ಆಘಾತಕಾರಿ ಘಟನೆ ಬಾಗಲಕೋಟೆಯಲ್ಲಿ ಬೆಳಕಿಗೆ ಬಂದಿದೆ. ಕೋಟಿ ದೇವರಿದ್ದರೂ ನಂಬಿಕೆಯೇ ದೊಡ್ಡದು ಎನ್ನುತ್ತಾರೆ, ಆದರೆ ಆ ನಂಬಿಕೆಗೇ ಇಲ್ಲಿ ದ್ರೋಹ ಬಗೆಯಲಾಗಿದೆ.

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಬಿದರಿ ಗ್ರಾಮದ ಜನತಾ ಪ್ಲಾಟಿನಲ್ಲಿರುವ ಪ್ರಸಿದ್ಧ ದುರ್ಗಾದೇವಿ ದೇವಸ್ಥಾನದಲ್ಲಿ ಈ ಜುಗುಪ್ಸೆ ತರುವ ಘಟನೆ ನಡೆದಿದೆ. ದೇವಸ್ಥಾನದ ಅರ್ಚಕನಾಗಿದ್ದ ವಸಂತ್ ಎಂಬಾತನೇ ತಾನು ಆರಾಧಿಸುತ್ತಿದ್ದ ದುರ್ಗಾದೇವಿಯ ಮೂರ್ತಿ ಹಾಗೂ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ಮತ್ತು ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿ ವಿಕೃತಿ ಮೆರೆದಿದ್ದಾನೆ. ದೇವರ ಆಭರಣಗಳು ನಾಪತ್ತೆಯಾದ ಬೆನ್ನಲ್ಲೇ ತನಿಖೆ ಕೈಗೆತ್ತಿಕೊಂಡ ಮುಧೋಳ ಪೊಲೀಸರು ಅತ್ಯಂತ ಚಾಣಾಕ್ಷತನದಿಂದ ಕಾರ್ಯಾಚರಣೆ ನಡೆಸಿ, ಖದೀಮ ಅರ್ಚಕ ವಸಂತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಬಂಧಿತ ಆರೋಪಿಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳ್ಳಿ ಮತ್ತು ಬಂಗಾರದ ಒಡವೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.

