Bagalkot

ಬಾಗಲಕೋಟೆಯಲ್ಲಿ RCB ಗೆಲುವಿನ ಅಬ್ಬರ: ಸಂಭ್ರಮಾಚರಣೆ ವೇಳೆ ಕುಡುಕರ ಹೈಡ್ರಾಮಾ, ಪೊಲೀಸರಿಂದ ಲಾಠಿ ಚಾರ್ಜ್!

Share

ಮುಳುಗಡೆ ನಗರಿ ಬಾಗಲಕೋಟೆಯಲ್ಲಿ ನಿನ್ನೆ ರಾತ್ರಿ ಐಪಿಎಲ್ ಪಂದ್ಯದಲ್ಲಿ ಆರ್ ಸಿಬಿ ಗೆಲುವಿನ ಸಂಭ್ರಮಾಚರಣೆ ವೇಳೆ ಭಾರಿ ಹೈಡ್ರಾಮಾ ನಡೆದಿದೆ. ಒಂದು ಕಡೆ ಅಭಿಮಾನಿಗಳು ಘೋಷಣೆ ಕೂಗಿ ಕುಣಿದು ಕುಪ್ಪಳಿಸಿದರೆ, ಮತ್ತೊಂದು ಕಡೆ ವಿದ್ಯಾಗಿರಿಯಲ್ಲಿ ಯುವಕರ ಎರಡು ಗುಂಪುಗಳ ನಡುವೆ ಭೀಕರ ಹೊಡೆದಾಟ ನಡೆದಿದ್ದು, ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.

ಐಪಿಎಲ್ ಪಂದ್ಯದಲ್ಲಿ ಆರ್ ಸಿಬಿ ಭರ್ಜರಿ ಗೆಲುವು ಸಾಧಿಸುತ್ತಿದ್ದಂತೆ ಬಾಗಲಕೋಟೆ ನಗರದ ಪ್ರಮುಖ ವೃತ್ತಗಳಲ್ಲಿ ಕ್ರಿಕೆಟ್ ಅಭಿಮಾನಿಗಳು ಜಮಾಯಿಸಿ, ‘ಆರ್ ಸಿಬಿ.. ಆರ್ ಸಿಬಿ..’ ಎಂದು ಘೋಷಣೆ ಕೂಗುತ್ತಾ ತಡರಾತ್ರಿವರೆಗೂ ಭರ್ಜರಿಯಾಗಿ ಸಂಭ್ರಮಿಸಿದರು. ನಗರದ ಹಳ್ಳಿ ಮನೆ ಸವಿಯಲ್ಲಿ ಬೃಹತ್ ಎಲ್ಇಡಿ ಸ್ಕ್ರೀನ್ ಅಳವಡಿಸಿ ಮ್ಯಾಚ್ ವೀಕ್ಷಿಸುತ್ತಿದ್ದ ಕ್ರೀಡಾ ಪ್ರೇಮಿಗಳು, ಗೆಲುವಿನ ಕ್ಷಣವನ್ನು ನಾಡಿನಾದ್ಯಂತ ಸಂಭ್ರಮಿಸಿ ಕುಣಿದು ಕುಪ್ಪಳಿಸಿದರು. ಆದರೆ, ಇದೇ ಗೆಲುವಿನ ಖುಷಿಯ ನಡುವೆ ಬಾಗಲಕೋಟೆ ನಗರದ ವಿದ್ಯಾಗಿರಿ ಸರ್ಕಲ್‌ನಲ್ಲಿ ತಡರಾತ್ರಿ ಸುಮಾರು 12 ಗಂಟೆಯ ಸುಮಾರಿಗೆ ಅಹಿತಕರ ಘಟನೆಯೊಂದು ಸಂಭವಿಸಿದೆ.
ಸಂಭ್ರಮಾಚರಣೆಗಾಗಿ ವಿದ್ಯಾಗಿರಿ ವೃತ್ತದಲ್ಲಿ ನೂರಾರು ಯುವಕರು ಜಮಾಯಿಸಿದ್ದ ವೇಳೆ, ಕುಡಿದ ಮತ್ತಿನಲ್ಲಿದ್ದ ಕೆಲವು ಯುವಕರು ಅತಿರೇಕದ ವರ್ತನೆ ತೋರಿದ್ದು, ಎರಡು ಗುಂಪುಗಳ ನಡುವೆ ದಿಢೀರ್ ಗಲಾಟೆ ಆರಂಭವಾಗಿದೆ. ಸ್ಥಳದಲ್ಲೇ ಇದ್ದ ಪೊಲೀಸರ ಸಮ್ಮುಖದಲ್ಲೇ ಯುವಕರು ಪರಸ್ಪರ ಕೈಕೈ ಮಿಲಾಯಿಸಿ, ಮನಬಂದಂತೆ ಹೊಡೆದಾಡಿಕೊಂಡಿದ್ದಾರೆ. ಯುವಕರ ಅತಿರೇಕದ ವರ್ತನೆ ಹಾಗೂ ಗಲಾಟೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ, ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಯುವಕರ ಗುಂಪಿನ ಮೇಲೆ ಲಘು ಲಾಠಿ ಪ್ರಹಾರ ನಡೆಸಿ ಚದುರಿಸಿದ್ದು, ಈ ಇಡೀ ಗಲಾಟೆಯ ದೃಶ್ಯಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ.

Tags:

error: Content is protected !!