Bagalkot

ಬಾಗಲಕೋಟೆಯ ಲೋಕಾಪುರ ಬಳಿ ಭೀಕರ ಅಪಘಾತ: ಲಾರಿ ಡಿಕ್ಕಿಯಾಗಿ ಇಬ್ಬರು ಮಹಿಳೆಯರ ಸ್ಥಿತಿ ಅತ್ಯಂತ ಚಿಂತಾಜನಕ!

Share

ಬಾಗಲಕೋಟೆ ಜಿಲ್ಲೆಯ ಲೋಕಾಪುರ ಬಳಿ ಇಂದು ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಮುಧೋಳ ತಾಲೂಕಿನ ಜಾಲಿಬೇರಿ ಗ್ರಾಮದ ಮೂವರು ಬೈಕ್ ಮೇಲೆ ಊರಿಗೆ ಹೊರಟಿದ್ದಾಗ, ವೇಗವಾಗಿ ಬಂದ ಲಾರಿಯೊಂದು ರಕ್ಕಸನಂತೆ ಧಾವಿಸಿ ಬೈಕ್‌ಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಇಬ್ಬರು ಮಹಿಳೆಯರು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

ಜಾಲಿಬೇರಿ ಗ್ರಾಮದ ನಿವಾಸಿಗಳಾದ ಕಾಶವ್ವ ಹೊಸಹಳ್ಳಿ (38) ಹಾಗೂ ದಾನವ್ವ ಹೊಸಹಳ್ಳಿ (26) ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಪರಿಸ್ಥಿತಿ ಚಿಂತಾಜನಕವಾಗಿರುವ ಮಹಿಳೆಯರಾಗಿದ್ದಾರೆ. ಇವರೊಂದಿಗೆ ಬೈಕ್ ಚಲಾಯಿಸುತ್ತಿದ್ದ ಪತಿ ಗಿರಿಯಪ್ಪ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದ ತೀವ್ರತೆಗೆ ರಸ್ತೆಯಲ್ಲೇ ರಕ್ತದ ಮಡುವಿನಲ್ಲಿ ಬಿದ್ದಿದ್ದ ಇಬ್ಬರು ಮಹಿಳೆಯರನ್ನು ತಕ್ಷಣವೇ ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನಾ ಸ್ಥಳಕ್ಕೆ ಬಾಗಲಕೋಟೆ ಎಸ್ಪಿ ಸಿದ್ದಾರ್ಥ್ ಗೋಯಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತಕ್ಕೆ ಕಾರಣವಾದ ಲಾರಿ ಚಾಲಕನ ವಿರುದ್ಧ ಲೋಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Tags:

error: Content is protected !!