ಬಾಗಲಕೋಟೆ ತಾಲೂಕಿನ ತುಳಸಿಗೇರಿಯಲ್ಲಿ ಮಧ್ಯರಾತ್ರಿ ಪಡಿತರ ಅಕ್ಕಿಯ ಅಕ್ರಮ ಸಾಗಾಟವನ್ನು ಜಾಗೃತ ಸಾರ್ವಜನಿಕರು ಬಯಲಿಗೆಳೆದಿದ್ದಾರೆ. ಆದರೆ ಈ ಪ್ರಕರಣವನ್ನು ಹಳ್ಳಹಿಡಿಸಲು ತೆರೆಮರೆಯಲ್ಲಿ ಭಾರಿ ಕಸರತ್ತು ನಡೆದಿದ್ದು, ಖುದ್ದಾಗಿ ಇಲಾಖೆಯ ಅಧಿಕಾರಿಗಳೇ ಶಾಮೀಲಾಗಿದ್ದಾರಾ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ತೀವ್ರಗೊಂಡಿದೆ.

ಬಾಗಲಕೋಟೆ ತಾಲೂಕಿನ ತುಳಸಿಗೇರಿ ಗ್ರಾಮಕ್ಕೆ ಮಧ್ಯರಾತ್ರಿ ಸುಮಾರು 1:30ರ ವೇಳೆಗೆ ಬಂದಿದ್ದ ಬುಲೆರೊ ಪಿಕಪ್ ವಾಹನದ ಮೇಲೆ ಅನುಮಾನಗೊಂಡ ಸ್ಥಳೀಯರು ತಕ್ಷಣವೇ ಕಾರ್ಯಪ್ರವೃತ್ತರಾಗಿ, ಅದರಲ್ಲಿದ್ದ 14 ಚೀಲಗಳಲ್ಲಿದ್ದ 5 ಕ್ವಿಂಟಲ್ಗೂ ಅಧಿಕ ಪಡಿತರ ಅಕ್ಕಿಯನ್ನು ಪತ್ತೆಹಚ್ಚಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆಯಾದರೂ, ಪ್ರಕರಣವನ್ನು ಹಿಂಪಡೆಯಲು ತೀವ್ರ ಒತ್ತಡ ಹೇರಲಾಗಿರುವ ಗಂಭೀರ ಆರೋಪ ಕೇಳಿಬಂದಿದೆ. ಅಚ್ಚರಿಯ ಸಂಗತಿಯೆಂದರೆ, ಗ್ರಾಮದ ದೇವಸ್ಥಾನದ ಬಳಿ ಘಟನೆ ನಡೆದಿದ್ದರೂ ಸಹ, ಪೊಲೀಸರು ದಾಖಲಿಸಿರುವ ಎಫ್ಐಆರ್ನಲ್ಲಿ (FIR) ಕೇಶವ ಸಿಮೆಂಟ್ ಫ್ಯಾಕ್ಟರಿ ಬಳಿ ಜಪ್ತಿ ಮಾಡಲಾಗಿದೆ ಎಂದು ಸ್ಥಳವನ್ನು ಬದಲಿಸಿ ಉಲ್ಲೇಖಿಸಿರುವುದು ತೀವ್ರ ಅನುಮಾನಗಳಿಗೆ ಕಾರಣವಾಗಿದೆ. ಈ ಇಡೀ ಅಕ್ರಮದ ಹಿಂದೆ ಸ್ಥಳೀಯ ಫುಡ್ ಇನ್ಸ್ಪೆಕ್ಟರ್ ಕೈವಾಡವಿರುವ ಶಂಕೆ ವ್ಯಕ್ತವಾಗಿದ್ದು, ಸಾರ್ವಜನಿಕರು ತನಿಖೆಗೆ ಒತ್ತಾಯಿಸಿದ್ದಾರೆ.

