ಚಿಕ್ಕೋಡಿ ಕರೋಶಿ ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ

ಕಾರು ಮತ್ತು ಗೂಡ್ಸ್ ವಾಹನ ಮುಖಾಮುಖಿ ಡಿಕ್ಕಿ

ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಪಲ್ಟಿಯಾದ ಗೂಡ್ಸ್
ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು ಹಾಗೂ ಚಾಲಕರು
ಚಿಕ್ಕೋಡಿ: ಕಾರು ಹಾಗೂ ಗೂಡ್ಸ್ ವಾಹನದ ನಡುವೆ ಸಂಭವಿಸಿದ ಭೀಕರ ಡಿಕ್ಕಿಯಲ್ಲಿ ಎರಡೂ ವಾಹನಗಳು ಜಖಂಗೊಂಡಿದ್ದು, ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಕರೋಶಿಯ ಹುಲಿಯಪ್ಪ ದೇವಸ್ಥಾನದ ಹತ್ತಿರ ಚಿಕ್ಕೋಡಿ-ಕರೋಶಿ ರಸ್ತೆಯಲ್ಲಿ ನಡೆದಿದೆ.
ಹುಕ್ಕೇರಿಯ ನಿವಾಸಿ ಬಸಗೌಡ ಪಾಟೀಲ್ ಎಂಬುವರು ತಮ್ಮ ಕುಟುಂಬದೊಂದಿಗೆ ಕಾರಿನಲ್ಲಿ ಹುಕ್ಕೇರಿಯಿಂದ ಚಿಕ್ಕೋಡಿ ಕಡೆಗೆ ಪ್ರಯಾಣಿಸುತ್ತಿದ್ದರು. ಇದೇ ವೇಳೆ ಚಿಕ್ಕೋಡಿಯಿಂದ ಹುಕ್ಕೇರಿ ಕಡೆಗೆ ಮಂಜುನಾಥ ಗಿರವುಗೊಳ್ ಎಂಬುವರು ತಮ್ಮ ಗೂಡ್ಸ್ ವಾಹನವನ್ನು ಚಲಾಯಿಸಿಕೊಂಡು ಹೋಗುತ್ತಿದ್ದರು. ಕರೋಶಿಯ ಹುಲಿಯಪ್ಪ ದೇವಸ್ಥಾನದ ಸಮೀಪ ಬರುತ್ತಿದ್ದಂತೆ ಎರಡೂ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ.
ಡಿಕ್ಕಿಯ ರಭಸಕ್ಕೆ ಗೂಡ್ಸ್ ವಾಹನವು ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಪಲ್ಟಿಯಾಗಿದೆ. ಇತ್ತ ಕಾರು ಚಾಲಕನ ಸಮಯಪ್ರಜ್ಞೆ ಹಾಗೂ ಪ್ರಯತ್ನದಿಂದಾಗಿ ರಸ್ತೆಯ ಮಧ್ಯದಲ್ಲೇ ನಿಂತಿದೆ. ಅಪಘಾತದ ತೀವ್ರತೆಗೆ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಇಷ್ಟೊಂದು ಭೀಕರ ಅಪಘಾತ ಸಂಭವಿಸಿದರೂ ಎರಡೂ ವಾಹನಗಳಲ್ಲಿದ್ದವರಿಗೆ ಯಾವುದೇ ಪ್ರಾಣಹಾನಿ ಸಂಭವಿಸದೇ ಇರುವುದು ಸಮಾಧಾನದ ಸಂಗತಿಯಾಗಿದೆ.
