Bagalkot

ಬಾಗಲಕೋಟೆ ರಾಜಕೀಯ ರಣರಂಗ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬೆನ್ನಲ್ಲೇ ಮಂತ್ರಿಗಿರಿಗೆ ಮೂವರಿಂದ ಭರ್ಜರಿ ಫೈಟ್!

Share

ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆಯಾದ ಬೆನ್ನಲ್ಲೇ ಬಾಗಲಕೋಟೆ ಜಿಲ್ಲೆಯಲ್ಲಿ ಸಚಿವಾಕಾಂಕ್ಷಿಗಳ ಲಾಬಿ ತಾರಕಕ್ಕೇರಿದೆ. ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದ ಆರ್. ಬಿ. ತಿಮ್ಮಾಪುರ ಅವರಿಗೆ ಸಚಿವ ಸ್ಥಾನ ಕೈತಪ್ಪುವ ಭೀತಿ ಎದುರಾಗಿದ್ದು, ಜಿಲ್ಲೆಯ ಮತ್ತಿಬ್ಬರು ಪ್ರಭಾವಿ ಶಾಸಕರು ಮಂತ್ರಿ ಸ್ಥಾನಕ್ಕಾಗಿ ಹೈಕಮಾಂಡ್ ಮಟ್ಟದಲ್ಲಿ ಕಸರತ್ತು ಆರಂಭಿಸಿದ್ದಾರೆ. ಜಿಲ್ಲೆಗೆ ಮತ್ತೊಮ್ಮೆ ಸಚಿವ ಸ್ಥಾನ ಸಿಗುತ್ತಾ ಎಂಬ ಕುತೂಹಲ ಈಗ ಮನೆಮಾಡಿದೆ.

ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗುತ್ತಿದ್ದಂತೆ ಬಾಗಲಕೋಟೆ ಜಿಲ್ಲೆಯ ಸಚಿವಾಕಾಂಕ್ಷಿಗಳ ಪಟ್ಟಿ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಈ ಹಿಂದೆ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದ ಹಿರಿಯ ನಾಯಕ ಆರ್. ಬಿ. ತಿಮ್ಮಾಪುರ ಅವರ ಎದೆಯಲ್ಲಿ ಈಗ ಢವಢವ ಶುರುವಾಗಿದ್ದು, ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಅವರು ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ. ಇದೇ ವೇಳೆ ತಿಮ್ಮಾಪುರ ಬೆಂಬಲಿಗರು ಒಂದು ಹೆಜ್ಜೆ ಮುಂದೆ ಹೋಗಿ, ದಲಿತ ಎಡಗೈ ಕೋಟಾದ ಅಡಿಯಲ್ಲಿ ಅವರಿಗೆ ಉಪಮುಖ್ಯಮಂತ್ರಿ (ಡಿಸಿಎಂ) ಸ್ಥಾನ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ. ಆದರೆ ಇತ್ತ ಜಿಲ್ಲೆಯ ಮತ್ತಿಬ್ಬರು ಪ್ರಮುಖ ಶಾಸಕರು ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಹೈಕಮಾಂಡ್ ಮಟ್ಟದಲ್ಲಿ ಪ್ರಭಾವಿ ಲಾಬಿ ಆರಂಭಿಸಿರುವುದು ತಿಮ್ಮಾಪುರ ಅವರಿಗೆ ತಲೆನೋವಾಗಿ ಪರಿಣಮಿಸಿದೆ.

ಪಂಚಮಸಾಲಿ ಕೋಟಾದ ಅಡಿಯಲ್ಲಿ ಹೂವಿನಹಿಪ್ಪರಗಿ ಕ್ಷೇತ್ರದ ಎರಡನೇ ಬಾರಿಯ ಶಾಸಕ ವಿಜಯಾನಂದ ಕಾಶಪ್ಪನವರ ಸಚಿವ ಸ್ಥಾನಕ್ಕಾಗಿ ಭರ್ಜರಿ ಕಸರತ್ತು ನಡೆಸುತ್ತಿದ್ದಾರೆ. ಕಾಶಪ್ಪನವರ ಬೆಂಬಲಿಗರು ಈಗಾಗಲೇ ಕ್ಷೇತ್ರದಲ್ಲಿ ವಿಶೇಷ ಪೂಜೆ ಹಾಗೂ ಸುದ್ದಿಗೋಷ್ಠಿಗಳನ್ನು ನಡೆಸಿ ಸಮುದಾಯದ ಆಧಾರದ ಮೇಲೆ ಮಂತ್ರಿಗಿರಿ ನೀಡುವಂತೆ ಹೈಕಮಾಂಡ್‌ಗೆ ಆಗ್ರಹಿಸುತ್ತಿದ್ದಾರೆ. ಇದರ ನಡುವೆ, ಜಿಲ್ಲೆಯ ಮತ್ತೊಬ್ಬ ಹಿರಿಯ ಶಾಸಕ ಜೆ. ಟಿ. ಪಾಟೀಲ್ ಕೂಡ ಮಂತ್ರಿಗಿರಿಗೆ ಫೈಟ್ ಆರಂಭಿಸಿದ್ದು, ತಮ್ಮ ಹಿರಿತನದ ಆಧಾರದ ಮೇಲೆ ಈ ಬಾರಿ ಸ್ಥಾನ ನೀಡಲೇಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಮೂವರು ಶಾಸಕರ ಬೆಂಬಲಿಗರು ಕ್ಷೇತ್ರದಲ್ಲಿ ಸುದ್ದಿಗೋಷ್ಠಿಗಳ ಮೂಲಕ ಒತ್ತಡ ಹೇರುತ್ತಿದ್ದು, ಹೈಕಮಾಂಡ್ ಯಾರಿಗೆ ಮಣೆ ಹಾಕುತ್ತದೆ ಮತ್ತು ಬಾಗಲಕೋಟೆ ಜಿಲ್ಲೆಗೆ ಮತ್ತೊಮ್ಮೆ ಸಚಿವ ಸ್ಥಾನ ಸಿಗುತ್ತಾ ಎಂಬುದನ್ನು ಕಾದುನೋಡಬೇಕಿದೆ.

Tags:

error: Content is protected !!