ಬಾಗಲಕೋಟೆ ರಾಜಕಾರಣದಲ್ಲಿ ಈಗ ಉಪಮುಖ್ಯಮಂತ್ರಿ ಸ್ಥಾನದ ಕಿಚ್ಚು ಜೋರಾಗಿದೆ. ಹಿರಿಯ ನಾಯಕ, ಸಚಿವ ಆರ್.ಬಿ. ತಿಮ್ಮಾಪುರ ಅವರಿಗೆ ಡಿಸಿಎಂ ಪಟ್ಟ ನೀಡಬೇಕೆಂದು ದಲಿತ ಮುಖಂಡರು ರಾಜ್ಯ ಸರ್ಕಾರವನ್ನು ಬಲವಾಗಿ ಆಗ್ರಹಿಸಿದ್ದಾರೆ. ಒಂದು ವೇಳೆ ತಿಮ್ಮಾಪುರ ಅವರಿಗೆ ಸೂಕ್ತ ಸ್ಥಾನಮಾನ ಸಿಗದಿದ್ದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಹಿನ್ನಡೆಯಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಬಾಗಲಕೋಟೆಯಲ್ಲಿಂದು ಜಂಟಿ ಸುದ್ದಿಗೋಷ್ಠಿ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ ದಲಿತ ಮುಖಂಡರು, ಸಚಿವ ಆರ್.ಬಿ. ತಿಮ್ಮಾಪುರ ಅವರಿಗೆ ತಕ್ಷಣವೇ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಒಕ್ಕೊರಲಿನಿಂದ ಒತ್ತಾಯಿಸಿದರು. ಈಗಾಗಲೇ ನಾಲ್ಕು ಬಾರಿ ಸಚಿವರಾಗಿ ಜನಪ್ರಿಯ ಸೇವೆ ಸಲ್ಲಿಸಿರುವ ತಿಮ್ಮಾಪುರ ಅವರು, ದಲಿತ ಸಮಾಜವನ್ನು ಎಂದಿಗೂ ಎಡ-ಬಲ ಎಂದು ಭೇದಭಾವ ಮಾಡದೆ ಎಲ್ಲರನ್ನೂ ಸಮಾನವಾಗಿ ಮುನ್ನಡೆಸಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯ ಪ್ರಭಾವಿ ಡಿಸಿಎಂ ಅಭ್ಯರ್ಥಿಯನ್ನೇ ಧೂಳೀಪಟ ಮಾಡಿದ ಇಂತಹ ಧೀಮಂತ ನಾಯಕನಿಗೆ ಪಕ್ಷಕ್ಕಾಗಿ ನೀಡಿದ ಕೊಡುಗೆಯನ್ನು ಪರಿಗಣಿಸಿ ಹೈಕಮಾಂಡ್ ಡಿಸಿಎಂ ಸ್ಥಾನ ನೀಡಬೇಕು; ಇಲ್ಲದಿದ್ದರೆ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಇದರ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಮುಖಂಡರು ನೇರ ಎಚ್ಚರಿಕೆ ನೀಡಿದ್ದಾರೆ.

