ಚಿಕ್ಕೋಡಿ:ಶಿಕ್ಷಕರು ಮತ್ತು ಸರ್ಕಾರಿ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿ ವೃತ್ತಿ ಜೀವನದಲ್ಲಿ ಹೇಗೆ ಯಶಸ್ವಿಯಾಗಬಹುದು ಎಂಬುದಕ್ಕೆ ಚಿಕ್ಕೋಡಿಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ (ಡಿಡಿಪಿಯು) ಪಿ. ಐ. ಭಂಡಾರೆ ಅವರೇ ಆದರ್ಶಪ್ರಾಯರಾಗಿದ್ದಾರೆ” ಎಂದು ಕಕಮರಿ ಮಠದ ಶ್ರೀ ಅಭಿನವಲಿಂಗ ಸ್ವಾಮೀಜಿ ಶ್ಲಾಘಿಸಿದರು.

ಚಿಕ್ಕೋಡಿಯ ಆರ್. ಡಿ. ಮಹಾವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪಿ. ಐ. ಭಂಡಾರೆ ಅವರ ನಿವೃತ್ತಿ ಹಾಗೂ ಗೌರವ ಸತ್ಕಾರ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು. “ಇಂದಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರವು ವಾಣಿಜ್ಯೀಕರಣಗೊಳ್ಳುತ್ತಿದೆ. ಶಿಕ್ಷಕರು ಭಿನ್ನಾಭಿಪ್ರಾಯಗಳನ್ನು ಮರೆತು ಮಕ್ಕಳ ಭವಿಷ್ಯಕ್ಕಾಗಿ ಪ್ರಾಮಾಣಿಕ ಸೇವೆ ಸಲ್ಲಿಸಬೇಕು. ಭಂಡಾರೆ ಅವರು ನಿವೃತ್ತಿಯ ನಂತರದ ಜೀವನವನ್ನು ಕುಟುಂಬ ಮತ್ತು ಸಮಾಜದ ಸೇವೆಗೆ ವಿನಿಯೋಗಿಸಲಿ” ಎಂದು ಆಶೀರ್ವದಿಸಿದರು.

ನಿವೃತ್ತ ಪ್ರಾಧ್ಯಾಪಕ ಎನ್. ವಿ. ಶಿರಗಾಂವಕರ ಮಾತನಾಡಿ, “ಭಂಡಾರೆ ಅವರು ಕಳೆದ 5 ವರ್ಷಗಳಿಂದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಮಾದರಿ ಕಾರ್ಯ ನಿರ್ವಹಿಸಿದ್ದಾರೆ. ಅವರ ಅವಿರತ ಪ್ರಯತ್ನದಿಂದಾಗಿಯೇ ಇಂದು ಚಿಕ್ಕೋಡಿಯಲ್ಲಿ ಡಿಡಿಪಿಯು ಕಚೇರಿಯ ನೂತನ ಕಟ್ಟಡ ತಲೆಯೆತ್ತಿದೆ” ಎಂದರು.
ಸತ್ಕಾರ ಸ್ವೀಕರಿಸಿ ಮಾತನಾಡಿದ ಪಿ. ಐ. ಭಂಡಾರೆ, “ನಾನು ಶಿಕ್ಷಣ ಇಲಾಖೆಯಲ್ಲಿ 33 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು, ಇದರಲ್ಲಿ 14 ವರ್ಷ ಪ್ರಾಚಾರ್ಯ ಹಾಗೂ ಪ್ರಾಧ್ಯಾಪಕರಾಗಿ ಮತ್ತು 5 ವರ್ಷ ಉಪನಿರ್ದೇಶಕರಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದೇನೆ. ಈ ಯಶಸ್ಸಿಗೆ ನನ್ನ ಕುಟುಂಬ, ಸಹೋದ್ಯೋಗಿಗಳು ಹಾಗೂ ಪ್ರಮುಖವಾಗಿ ವಿಧಾನ ಪರಿಷತ ಸದಸ್ಯ ಪ್ರಕಾಶ ಹುಕ್ಕೇರಿ ಅವರ ಸಹಕಾರವೇ ಕಾರಣ” ಎಂದು ಕೃತಜ್ಞತೆ ಸಲ್ಲಿಸಿದರು. ಇದೇ ವೇಳೆ ಭಂಡಾರೆ ದಂಪತಿಯಿಂದ ನಿವೃತ್ತ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಎಂ. ಆರ್. ಭಂಡಾರೆ, ಅನುಸೂಯಾ ಭಂಡಾರೆ, ನಿವೃತ್ತ ಉಪನಿರ್ದೇಶಕ ಎಸ್. ಬಿ. ಪೂಜಾರಿ, ಸಿಟಿಇ ಸಂಸ್ಥೆಯ ನಿರ್ದೇಶಕ ವಿ. ಪಿ. ಶೆಡಬಾಳ, ಡಿಡಿಪಿಐ ಸೀತಾರಾಮ, ಡಾ. ಪ್ರವೀಣ್ ಭಂಡಾರೆ ,ಕಾಗವಾಡ ಶಿವಾನಂದ ಪದವಿ ಪೂರ್ವ ಮಹಾವಿದ್ಯಾಲಯ ಪ್ರಾಚಾರ್ಯ ಪಿ.ಬಿ.ನಂದಾಳೆ ಸೇರಿದಂತೆ ಹಲವು ಗಣ್ಯರು, ಪ್ರಾಚಾರ್ಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಎಂ. ಎ. ಚೌಗಲಾ ಸ್ವಾಗತಿಸಿದರು, ಪ್ರಕಾಶ ಮನಗೂಳಿ ಕಾರ್ಯಕ್ರಮ ನಿರೂಪಿಸಿದರು.
