Chikkodi

ಆಸ್ತಿಗಾಗಿ ಹೆತ್ತ ತಾಯಿಯ ಮೇಲೆ ಹಲ್ಲೆ; ಪೆನ್ಷನ್, ಗೃಹಲಕ್ಷ್ಮೀ ಹಣ ಲೂಟಿ ಮಾಡಿ ವೃದ್ಧೆಯನ್ನು ಬೀದಿಗಿಟ್ಟ ಪಾಪಿ ಮಗ!!!

Share

ವಯೋವೃದ್ಧ ತಾಯಿಯ ಪೆನ್ಷನ್ ಹಾಗೂ ಗೃಹಲಕ್ಷ್ಮೀ ಯೋಜನೆಯ ಹಣವನ್ನು ವಂಚನೆಯ ಮೂಲಕ ಪಡೆದು, ತವರು ಮನೆಯ ಆಸ್ತಿಯಲ್ಲಿ ಪಾಲು ತರುವಂತೆ ಒತ್ತಡ ಹೇರಿ ಮನೆಯಿಂದ ಹೊರಹಾಕಿದ ಆರೋಪ ಮಗನ ವಿರುದ್ಧ ಕೇಳಿಬಂದಿದೆ.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮಾಡಲಗಿ ಗ್ರಾಮದ 78 ವರ್ಷದ ಸತ್ಯವ್ವ ಖಾಂಡೆಕರ ಅವರು ತಮ್ಮ ಮಗ ಹಾಲಪ್ಪಾ ಖಾಂಡೆಕರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ತವರು ಮನೆಯ ಆಸ್ತಿಯಲ್ಲಿ ಪಾಲು ತಂದುಕೊಡುವಂತೆ ಒತ್ತಾಯಿಸಿದ ಪುತ್ರ, ಅದಕ್ಕೆ ಒಪ್ಪದಿದ್ದಾಗ ಹಲ್ಲೆ ನಡೆಸಿ ಮನೆಯಿಂದ ಹೊರಹಾಕಿದ್ದಾನೆ ಎಂದು ವೃದ್ಧೆ ಅಳಲು ತೋಡಿಕೊಂಡಿದ್ದಾರೆ. ಇದರ ಜೊತೆಗೆ, ಸತ್ಯವ್ವ ಅವರಿಗೆ ಸರ್ಕಾರದಿಂದ ದೊರೆಯುತ್ತಿದ್ದ ಪೆನ್ಷನ್ ಹಾಗೂ ಗೃಹಲಕ್ಷ್ಮೀ ಯೋಜನೆಯ ಹಣವನ್ನೂ ವಂಚನೆಯ ಮೂಲಕ ಪಡೆದುಕೊಳ್ಳಲಾಗಿದೆ ಎನ್ನಲಾಗಿದೆ. ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಮತ್ತೊಬ್ಬ ಮಹಿಳೆಯ ಹೆಬ್ಬೆಟ್ಟು ಬಳಸಿಕೊಂಡು ಡ್ರಾ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಕುಟುಂಬದ ಮೂಲಗಳು ಒತ್ತಾಯಿಸಿವೆ. ಪ್ರಸ್ತುತ ಸತ್ಯವ್ವ ಅವರು ತಮ್ಮ ತವರು ಮನೆ ಇರುವ ಚಿಕ್ಕೋಡಿ ತಾಲೂಕಿನ ಬೆಳಕೂಡ ಗ್ರಾಮದ ವಡೆರ್ ತೋಟದಲ್ಲಿ ಆಶ್ರಯ ಪಡೆದು ಜೀವನ ಸಾಗಿಸುತ್ತಿದ್ದು, ಮಗನ ವರ್ತನೆಯಿಂದ ತೀವ್ರ ಮಾನಸಿಕ ಹಾಗೂ ದೈಹಿಕ ಸಂಕಷ್ಟ ಅನುಭವಿಸುತ್ತಿದ್ದಾರೆ.

ವೃದ್ಧಾಪ್ಯದಲ್ಲಿ ಆಸರೆಯಾಗಬೇಕಿದ್ದ ಮಗನೇ ಆಸ್ತಿ ಮತ್ತು ಹಣದ ಆಸೆಗೆ ತಾಯಿಯನ್ನು ನಿರ್ಲಕ್ಷಿಸಿರುವ ಆರೋಪ ಗ್ರಾಮದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಪ್ರಕರಣದ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮೇಕಳಿ ಶಾಖೆಯ ಮೇಲಧಿಕಾರಿಗಳು ಪರಿಶೀಲನೆ ನಡೆಸಿ, ಹಣಕಾಸು ವಂಚನೆ ನಡೆದಿರುವುದು ದೃಢಪಟ್ಟಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Tags:

error: Content is protected !!