ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮದಲ್ಲಿ ಭಕ್ತಿ ಮತ್ತು ರೋಮಾಂಚನದ ಪರಾಕಾಷ್ಠೆ ಕಂಡುಬಂದಿದೆ. ಗ್ರಾಮ ದೇವತೆ ದಂಡಿನ ದುರ್ಗಾದೇವಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ, ದೇವಸ್ಥಾನದ ಅರ್ಚಕರು ತಮ್ಮ ತಲೆಗೆ ತೆಂಗಿನಕಾಯಿ ಒಡೆದುಕೊಂಡು ವಿಸ್ಮಯಕಾರಿ ರೀತಿಯಲ್ಲಿ ದೇವಿಗೆ ಹರಕೆ ಸಮರ್ಪಿಸಿದ್ದಾರೆ.

ಬಾಗಲಕೋಟೆ ತಾಲೂಕಿನ ಪ್ರಸಿದ್ಧ ಕಲಾದಗಿ ಗ್ರಾಮದ ಆರಾಧ್ಯ ದೈವ ದಂಡಿನ ದುರ್ಗಾದೇವಿ ಜಾತ್ರಾ ಮಹೋತ್ಸವವು ಸಡಗರ-ಸಂಭ್ರಮದಿಂದ ಜರುಗುತ್ತಿದ್ದು, ಈ ಸಂದರ್ಭದಲ್ಲಿ ತಲೆ ತಲಾಂತರದ ವಿಶಿಷ್ಟ ಆಚರಣೆಯೊಂದು ಜರುಗಿದೆ. ದೇವಸ್ಥಾನದ ಪ್ರಮುಖ ಅರ್ಚಕರುಗಳಾದ ಚಂದಪ್ಪ ಕಾಳೆ ಹಾಗೂ ಲಕ್ಷ್ಮಣ್ ಕಾಳೆ ಅವರು ತಲೆಯ ಮೇಲೆ ತೆಂಗಿನಕಾಯಿ ಒಡೆದುಕೊಳ್ಳುವ ಮೂಲಕ ದೇವಿಗೆ ಅತ್ಯಂತ ನಿಷ್ಠೆಯಿಂದ ‘ಈಡಗಾಯಿ ಭಕ್ತಿ’ ಸಮರ್ಪಿಸಿದರು. ಹರಣಶಿಕಾರಿ ಸಮುದಾಯವು ತಲೆ ತಲಾಂತರಗಳಿಂದ ಅತ್ಯಂತ ಕಟ್ಟುನಿಟ್ಟಾಗಿ ಆಚರಿಸಿಕೊಂಡು ಬಂದಿರುವ ಈ ವಿಶಿಷ್ಟ ಸಂಪ್ರದಾಯ ಇಂದಿಗೂ ಮುಂದುವರಿದಿದ್ದು, ಇಡೀ ಜಾತ್ರೆಯ ಪ್ರಮುಖ ಆಕರ್ಷಣೆಯಾಗಿತ್ತು.

ಭಕ್ತಿ ಮತ್ತು ಶ್ರದ್ಧೆಯ ಸಂಕೇತವಾಗಿ ಅರ್ಚಕರು ತಲೆಯ ಮೇಲೆ ಕಾಯಿ ಒಡೆಯುತ್ತಿದ್ದಂತೆ ನೆರೆದಿದ್ದ ನೂರಾರು ಭಕ್ತರು ಜಯಘೋಷ ಕೂಗಿದರು. ಯಾವುದೇ ಗಾಯ ಅಥವಾ ಅನಾಹುತ ಸಂಭವಿಸದೆ ಅತ್ಯಂತ ಸಲೀಸಾಗಿ ತೆಂಗಿನಕಾಯಿಗಳು ಒಡೆದು ಹೋಗುವ ಈ ವಿಸ್ಮಯಕಾರಿ ಪವಾಡವನ್ನು ಕಂಡು ಭಕ್ತಾದಿಗಳು ಮೂಗಿನ ಮೇಲೆ ಬೆರಳಿಟ್ಟರು. ಈ ರೋಮಾಂಚನಕಾರಿ ಕ್ಷಣಕ್ಕೆ ಸಾಕ್ಷಿಯಾದ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು, ದಂಡಿನ ದುರ್ಗಾದೇವಿಯ ಅಪಾರ ಶಕ್ತಿ ಹಾಗೂ ಈ ಅದ್ಭುತ ಪರಂಪರೆಯನ್ನು ಕಣ್ತುಂಬಿಕೊಂಡು ಪುನೀತರಾದರು.
