ಸಿಎಂ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ ಬೆನ್ನಲ್ಲೇ ಗೃಹಕಚೇರಿ ಕೃಷ್ಣಾದಲ್ಲಿ ನಡೆದ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಸಿದ್ದರಾಮಯ್ಯ ಅವರು ತಮ್ಮ ಮುಂದಿನ ರಾಜಕೀಯ ನಡೆ ಹಾಗೂ ಭವಿಷ್ಯದ ಕುರಿತು ಅತ್ಯಂತ ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ತಮಗೆ ದೆಹಲಿ ರಾಜಕಾರಣಕ್ಕೆ ಹೋಗುವಂತೆ ಹೈಕಮಾಂಡ್ ಆಫರ್ ನೀಡಿತ್ತು ಎಂಬ ರಹಸ್ಯವನ್ನು ಬಿಚ್ಚಿಟ್ಟ ಅವರು, ತಾವು ಕೊನೆ ಉಸಿರಿರುವವರೆಗೂ ರಾಜ್ಯ ರಾಜಕಾರಣದಲ್ಲಿಯೇ ಇರುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಇಂದು ಗುರುವಾರ ಮಧ್ಯಾಹ್ನ 2:30ಕ್ಕೆ ಲೋಕಭವನಕ್ಕೆ ತೆರಳಿದ ಸಿಎಂ ಸಿದ್ಧರಾಮಯ್ಯನವರು ರಾಜ್ಯಪಾಲರ ಕಾರ್ಯದರ್ಶಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದರು.

ನಂತರ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಸಿದ್ಧರಾಮಯ್ಯನವರು ತಮ್ಮ ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ಮಾತನಾಡುತ್ತಾ ರಾಜ್ಯಸಭೆಯ ವಿಚಾರವನ್ನು ಸಿದ್ದರಾಮಯ್ಯ ಹೇಳಿದರು. ‘ಕಾಂಗ್ರೆಸ್ ಹೈಕಮಾಂಡ್ನ ನಾಯಕರು ನನಗೆ ದೆಹಲಿಗೆ ಬರುವಂತೆ ಹಾಗೂ ರಾಜ್ಯಸಭೆಗೆ ಹೋಗುವಂತೆ ಸೂಚಿಸಿದ್ದರು. ಆದರೆ, ನಾನು ಅತ್ಯಂತ ವಿನಮ್ರವಾಗಿ ಅವರ ಆಫರ್ ಅನ್ನು ನಿರಾಕರಿಸಿದ್ದೇನೆ. ನನಗೆ ದೆಹಲಿ ರಾಜಕಾರಣ ಬೇಡ, ನಾನು ಕರ್ನಾಟಕದ ರಾಜ್ಯ ರಾಜಕಾರಣದಲ್ಲೇ ಉಳಿಯುತ್ತೇನೆ ಎಂದು ಹೈಕಮಾಂಡ್ಗೆ ಸ್ಪಷ್ಟಪಡಿಸಿದ್ದೇನೆ. ಈ ನಾಡಿನ ಜನ ನನ್ನನ್ನು ಐದು ವರ್ಷಗಳ ಕಾಲ ಶಾಸಕನಾಗಿ ಆಯ್ಕೆ ಮಾಡಿದ್ದಾರೆ. ನಾನು ಸಕ್ರಿಯ ರಾಜಕಾರಣದಲ್ಲೇ ಮುಂದುವರಿಯಲಿದ್ದೇನೆ. ಯಾರ ಒತ್ತಡಕ್ಕೂ ಮಣಿಯದೆ ನಾನೇ ಸ್ವಯಂ ಪ್ರೇರಿತವಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ’ ಎಂದು ಹೇಳಿದರು.
ತಮ್ಮ 50 ವರ್ಷಗಳ ಸುದೀರ್ಘ ರಾಜಕೀಯ ಜೀವನವನ್ನು ನೆನೆದು ಭಾವುಕರಾದ ಸಿದ್ದರಾಮಯ್ಯ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಸ್ಮರಿಸಿದರು. ‘ನನ್ನ ರಾಜಕೀಯ ಜೀವನ ಒಂದು ತೆರೆದ ಪುಸ್ತಕ. ಈ ದೇಶದಲ್ಲಿ ಸಂವಿಧಾನ ಇಲ್ಲದೇ ಹೋಗಿದ್ದರೆ ನಾನು ವಿದ್ಯಾವಂತನಾಗಲು ಸಾಧ್ಯವಿರಲಿಲ್ಲ. ಸಂವಿಧಾನ ಇದ್ದಿದ್ದಕ್ಕೆ ಇಂದು ನಾನು ಶಾಸಕ, ಉಪಮುಖ್ಯಮಂತ್ರಿ, ಎರಡು ಬಾರಿ ಮುಖ್ಯಮಂತ್ರಿಯಾಗಲು ಸಾಧ್ಯವಾಯಿತು. ಇಲ್ಲದಿದ್ದರೆ ನಾನು ಹಳ್ಳಿಯಲ್ಲಿ ಕುರಿ ಮೇಯಿಸಿಕೊಂಡು ಇರಬೇಕಿತ್ತು’ ಎಂದರು. ನನ್ನ ದೇಹದಲ್ಲಿ ಕೊನೆ ಉಸಿರಿರುವವರೆಗೂ ಸಂವಿಧಾನಕ್ಕೆ ಧಕ್ಕೆ ತರುವವರ ವಿರುದ್ಧ ಹಾಗೂ ಕೋಮುವಾದಿ ಶಕ್ತಿಗಳ ವಿರುದ್ಧ ನನ್ನ ಹೋರಾಟ ಮುಂದುವರಿಯುತ್ತದೆ. ಸಮಾಜದಲ್ಲಿ ಸಮಾನತೆಗಾಗಿ ನಾನು ಸದಾ ಧ್ವನಿ ಎತ್ತುತ್ತೇನೆ’ ಎಂದು ಹೇಳಿದರು.
