Kagawad

ಐನಾಪುರ್ ಸಂತೋಷ್ ಕಮತೆ ಕೊಲೆ ಪ್ರಕರಣ: ಇಬ್ಬರು ಆರೋಪಿಗಳನ್ನು ಬಂಧಿಸಿದ ಕಾಗವಾಡ ಪೊಲೀಸರು

Share

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರ್ ಪಟ್ಟಣದಲ್ಲಿ ನಡೆದಿದ್ದ ಯುವಕನ ಭೀಕರ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಕಾಗವಾಡ ಪೊಲೀಸರು ಯಶಸ್ವಿಯಾಗಿದ್ದಾರೆ. ತೆಂಗಿನಕಾಯಿ ಮಾರಾಟದ ಕ್ಷುಲ್ಲಕ ಕಾರಣಕ್ಕೆ ನಡೆದಿದ್ದ ಈ ಕೊಲೆಯ ಇಬ್ಬರು ಪ್ರಮುಖ ಆರೋಪಿಗಳನ್ನು ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಬಂಧಿಸಿದ್ದಾರೆ.

 

ಕಾಗವಾಡ ತಾಲೂಕಿನ ಐನಾಪುರ್ ಗ್ರಾಮದ ನಿವಾಸಿ ಸಂತೋಷ್ ಸಿದ್ದಪ್ಪ ಕಮತೆ (೩೮) ಎಂಬುವವರನ್ನು ಮಂಗಳವಾರ ಮಧ್ಯಾಹ್ನ ಗೋವಿಂದ ಶಂಕರ ದೇವಲ ಇವರ ಜಮೀನಿನ बांधದ (ಬಾಂದು) ಮೇಲೆ ತಲೆಯ ಮೇಲೆ ಕಲ್ಲು ಜಜ್ಜಿ ಭೀಕರವಾಗಿ ಕೊಲೆ ಮಾಡಲಾಗಿತ್ತು. ಈ ಕುರಿತು ಮೃತನ ಸಹೋದರಿ ಶ್ರೀಮತಿ ಲಲಿತಾ ಸಿದ್ದಪ್ಪ ಕಮತೆ ಅವರು ಬುಧವಾರ ಕಾಗವಾಡ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಜಮೀನಿನಲ್ಲಿ ಬೆಳೆದಿದ್ದ ತೆಂಗಿನಕಾಯಿ ಮಾರಾಟ ಮಾಡುವ ವಿಷಯದಲ್ಲಿ ಉಂಟಾದ ಕ್ಷುಲ್ಲಕ ಗಲಾಟೆಯೇ ಈ ಕೊಲೆಗೆ ಪ್ರಮುಖ ಕಾರಣ ಎಂದು ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ತನಿಖೆ ಆರಂಭಿಸಿದ್ದರು.

ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್. ಬಿ. ಬಸರಗಿ ಹಾಗೂ ಅಥಣಿ ಡಿಎಸ್‌ಪಿ ಪ್ರಶಾಂತ್ ಮುನ್ನೋಳ್ಳಿ ಅವರ ಮಾರ್ಗದರ್ಶನದಲ್ಲಿ, ಅಥಣಿ ವೃತ್ತದ ಸಿಪಿಐ ಸಂತೋಷ್ ಹಳ್ಳೂರ್ ನೇತೃತ್ವ ಹಾಗೂ ಕಾಗವಾಡ ಪಿಎಸ್‌ಐ ರಾಘವೇಂದ್ರ ಖೋತ್ ಮುಂದಾಳತ್ವದ ಪೊಲೀಸ್ ತಂಡವು ಆರೋಪಿಗಳ ಪತ್ತೆಗೆ ಬಲೆ ಬೀಸಿತ್ತು. ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಐನಾಪುರ ಗ್ರಾಮದ ನಿವಾಸಿಗಳಾದ ಬಾಹುಬಲಿ ಬಾಳಾಸಾಹೇಬ ಬೋಸಗೆ (೨೮) ಮತ್ತು ಶ್ರೀಶೈಲ ಕಲ್ಲಪ್ಪ ಮಡಿವಾಳರ (೩೧) ಎಂಬ ಇಬ್ಬರು ಆರೋಪಿಗಳನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಿ, ಮುಂದಿನ ಕಾನೂನು ಕ್ರಮ ಜರುಗಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Tags:

error: Content is protected !!