State

ಸಿದ್ದರಾಮಯ್ಯ ರಾಜೀನಾಮೆ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಮಹಾ ಸ್ಫೋಟ: ಹೈಕಮಾಂಡ್ ವಿರುದ್ಧವೇ ತಿರುಗಿಬಿದ್ದ MLC ಲಖನ್ ಜಾರಕಿಹೊಳಿ!

Share

ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ಘೋಷಿಸುತ್ತಿದ್ದಂತೆ ಕಾಂಗ್ರೆಸ್ ಪಾಳಯದಲ್ಲಿ ಭಿನ್ನಮತದ ಜ್ವಾಲಾಮುಖಿ ಸ್ಫೋಟಗೊಂಡಿದೆ. ಸಿದ್ದರಾಮಯ್ಯ ಅವರನ್ನು ಕುರ್ಚಿಯಿಂದ ಇಳಿಸಿ ಹೈಕಮಾಂಡ್ ಜೇನುಗೂಡಿಗೆ ಕೈ ಹಾಕಿದೆ ಎಂದು ಸ್ವಪಕ್ಷದ ವಿಧಾನಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಗಂಭೀರ ಆರೋಪ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಸರ್ಕಾರವೇ ಪತನವಾಗಲಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಬೆನ್ನಲ್ಲೇ ಮಾಧ್ಯಮಗಳೊಂದಿಗೆ ಮಾತನಾಡಿರುವ ಎಂ.ಎಲ್.ಸಿ ಲಖನ್ ಜಾರಕಿಹೊಳಿ, ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ತೀವ್ರವಾಗಿ ಕಿಡಿ ಕಾರಿದ್ದಾರೆ. ಸಿದ್ದರಾಮಯ್ಯ ಅವರ ನಿರ್ಗಮನದಿಂದಾಗಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪತನದ ಹಾದಿ ಹಿಡಿಯಲಿದೆ. ಕಳೆದ ಮೂರು ವರ್ಷಗಳಿಂದ ಆರ್ಥಿಕ ಪರಿಸ್ಥಿತಿಯನ್ನು ಯಾರಿಗೂ ತೊಂದರೆಯಾಗದಂತೆ ಸಿದ್ದರಾಮಯ್ಯ ನಿಭಾಯಿಸಿಕೊಂಡು ಬಂದಿದ್ದರು. ಆದರೆ ಈಗ ಗ್ಯಾರಂಟಿಗಳ ನಿರ್ವಹಣೆ ಕಠಿಣವಾಗಲಿದ್ದು, ಸರ್ಕಾರಿ ನೌಕರರಿಗೆ ವೇತನ ನೀಡಲು ಕೂಡ ಸರ್ಕಾರ ಪರದಾಡಬೇಕಾಗುತ್ತದೆ. ಹಿರಿಯ ನಾಯಕರನ್ನು ಕೆಳಗಿಳಿಸುವ ಮೂಲಕ ಹೈಕಮಾಂಡ್ ಕುರುಬ ಸಮಾಜ ಹಾಗೂ ಇಡೀ ಅಹಿಂದ ವರ್ಗಕ್ಕೆ ದ್ರೋಹ ಬಗೆದಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಹಿಂದೆ ವೀರೇಂದ್ರ ಪಾಟೀಲರನ್ನು ಇಳಿಸಿ ಲಿಂಗಾಯತ ಸಮಾಜಕ್ಕೆ ಅನ್ಯಾಯ ಮಾಡಿದ್ದ ಕಾಂಗ್ರೆಸ್, ಈಗ ಅಹಿಂದ ನಾಯಕರನ್ನು ತುಳಿಯುತ್ತಿದೆ ಎಂದು ಲಖನ್ ಜಾರಕಿಹೊಳಿ ನೇರ ವಾಗ್ದಾಳಿ ನಡೆಸಿದ್ದಾರೆ. ಹೈಕಮಾಂಡ್ ನಾಯಕರಾದ ರಣದೀಪ್ ಸಿಂಗ್ ಸುರ್ಜೆವಾಲಾ ಮತ್ತು ಕೆ.ಸಿ. ವೇಣುಗೋಪಾಲ್ ದೊಡ್ಡ ಲೀಡರ್‌ಗಳಂತೆ ವರ್ತಿಸಿ ಕರ್ನಾಟಕದ ರಾಜಕಾರಣವನ್ನು ಹಾಳು ಮಾಡಿದ್ದಾರೆ. ಅಹಿಂದ ಸಮಾಜಕ್ಕೆ ಮಾಡಿರುವ ಈ ಮೋಸ ಮತ್ತು ಹಾಕಿಸುತ್ತಿರುವ ಕಣ್ಣೀರು 2028ರ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜ್ವಾಲಾಮುಖಿಯಾಗಿ ಸ್ಫೋಟಗೊಳ್ಳಲಿದೆ. ಆಗ ಕಾಂಗ್ರೆಸ್ ಪಕ್ಷ ಕೇವಲ 40 ಸೀಟು ಗೆದ್ದರೂ ಆಶ್ಚರ್ಯ ಪಡಬೇಕಿಲ್ಲ ಎಂದು ಲಖನ್ ಜಾರಕಿಹೊಳಿ ತಮ್ಮದೇ ಪಕ್ಷಕ್ಕೆ ತೀವ್ರ ಎಚ್ಚರಿಕೆ ನೀಡಿದ್ದಾರೆ.

Tags:

error: Content is protected !!