ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಸಿದ್ದರಾಮಯ್ಯ ಮುಖ್ಯಮಂತ್ರಿ ಕುರ್ಚಿ ಬದಲಾವಣೆ ಚರ್ಚೆಯ ಮಧ್ಯೆ ಕಾಂಗ್ರೆಸ್ ಹೈಕಮಾಂಡ್ ಸೂಚನೆಯಂತೆ ಸಿಎಂ ಸಿದ್ದರಾಮಯ್ಯ ಅವರು ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ತಮ್ಮ ಸಂಪುಟ ಸಹೋದ್ಯೋಗಿಗಳೊಂದಿಗೆ ಇಂದು ಬೆಳಗ್ಗೆ ಉಪಹಾರ ಸಭೆ ನಡೆಸಿದರು. ಸರ್ಕಾರಿ ನಿವಾಸ ಕಾವೇರಿಯಲ್ಲಿ ನಡೆದ ಈ ಸಭೆಯಲ್ಲಿ, ತಾವು ಸಿಎಂ ಹುದ್ದೆಯಿಂದ ಕೆಳಗಿಳಿಯುವುದಾಗಿ ಅವರು ಪ್ರಕಟಿಸಿದರು.


ಮಂಗಳವಾರ ದೆಹಲಿಯಲ್ಲಿ ನಡೆದ ಹೈಕಮಾಂಡ್ ನೇತೃತ್ವದ ಸಭೆಯಲ್ಲಿ ಸಿದ್ದರಾಮಯ್ಯ ಅಧಿಕಾರ ಹಸ್ತಾಂತರಕ್ಕೆ ಸಮ್ಮತಿಸಿದ್ದರು. ರಾಹುಲ್ ಗಾಂಧಿಯವರಿಂದಲೇ ಸಂದೇಶ ಬಂದಿದ್ದರಿಂದ ರಾಜೀನಾಮೆ ನೀಡಲು ನಿರ್ಧರಿಸಿದರು ಎಂದು ಮೂಲಗಳು ಹೇಳಿವೆ.

ಬ್ರೇಕ್ಫಾಸ್ಟ್ ಸಭೆಯಲ್ಲಿ ನಾಯಕತ್ವ ಬದಲಾವಣೆ ಸಂಬಂಧ ಚರ್ಚೆ ನಡೆಯಿತು. ಸುಗಮ ಅಧಿಕಾರ ಹಸ್ತಾಂತರ ನಿಟ್ಟಿನಲ್ಲಿ, ಒಗ್ಗಟ್ಟಿನ ಸಂದೇಶ ಸಾರಲು ಹಾಗೂ ಪರಸ್ಪರ ವಿಶ್ವಾಸ ಮೂಡಿಸಲು ಉಭಯ ನಾಯಕರ ಬ್ರೇಕ್ ಫಾಸ್ಟ್ ಸಭೆ ಆಯೋಜನೆಯಾಗಿತ್ತು.
ಡಿಸಿಎಂ ಡಿ.ಕೆ.ಶಿವಕುಮಾರ್, ಗೃಹಸಚಿವ ಜಿ.ಪರಮೇಶ್ವರ್, ಸಚಿವರಾದ ಎಂ.ಸಿ.ಸುಧಾಕರ್, ಬೈರತಿ ಸುರೇಶ್, ಸಂತೋಷ್ ಲಾಡ್, ಸಚಿವ ರಾಮಲಿಂಗ ರೆಡ್ಡಿ ಸೇರಿದಂತೆ ಇತರರು ಭಾಗವಹಿಸಿದ್ದರು.
