• ಬೆಳಗಾವಿ ಲೋಕಾಯುಕ್ತ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ
• ಹೆಸ್ಕಾಂ ಶಾಖಾಧಿಕಾರಿ ಮಾರುತಿ ಮೇಟಿ ಬಂಧನ
• ಲಂಚದ ಹಣದ ಸಮೇತ ಸಿಕ್ಕಿಬಿದ್ದ ಅಧಿಕಾರಿ
• ಭ್ರಷ್ಟ ಅಧಿಕಾರಿಗೆ ಸಿಕ್ಕಿತು ಸದ್ಯ ನ್ಯಾಯಾಂಗ ಬಂಧನ

ಬೆಳಗಾವಿ: ಜಿಲ್ಲೆಯ ಮೂಡಲಗಿ ತಾಲೂಕಿನಲ್ಲಿ ಲೋಕಾಯುಕ್ತ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ವಿದ್ಯುತ್ ಸಂಪರ್ಕ ಕಾಮಗಾರಿಯ ಅಂದಾಜು ಪತ್ರಿಕೆ ತಯಾರಿಸಲು ಕ್ಲಾಸ್-1 ಗುತ್ತಿಗೆದಾರರಿಂದ 25 ಸಾವಿರ ರೂಪಾಯಿ ಲಂಚದ ಹಣ ಪಡೆಯುತ್ತಿದ್ದ ಕಲ್ಲೋಳ್ಳಿ ಗ್ರಾಮದ ಹೆಸ್ಕಾಂ ಶಾಖಾಧಿಕಾರಿ ಮಾರುತಿ ಮೇಟಿ ಎಂಬಾತ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.

ಮೂಡಲಗಿ ತಾಲೂಕಿನ ತುಕ್ಕಾನಟ್ಟಿ ಗ್ರಾಮದ ನಿವಾಸಿ ಹಾಗೂ ಕ್ಲಾಸ್-1 ವಿದ್ಯುತ್ ಗುತ್ತಿಗೆದಾರರಾದ ಪ್ರೀತಿ ಬಾಗಿ ಅವರ ಪರವಾಗಿ, ಮೂರು ಸ್ಥಳಗಳ ಪರಿಶೀಲನೆ ನಡೆಸಿ ಅಂದಾಜು ಪತ್ರಿಕೆ ನೀಡಲು ಹೆಸ್ಕಾಂ ಶಾಖಾಧಿಕಾರಿ ಮಾರುತಿ ಮೇಟಿ 25,000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದನು. ಲಂಚ ನೀಡಲು ನಿರಾಕರಿಸಿದ ಫಿರ್ಯಾದಿದಾರರು ಫೆಬ್ರವರಿ 27, 2026 ರಂದು ಬೆಳಗಾವಿ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಪ್ರಸನ್ನ ದೇಸಾಯಿ ಅವರ ಮಾರ್ಗದರ್ಶನದಲ್ಲಿ, ಇನ್ಸ್‌ಪೆಕ್ಟರ್ ಸಂಗಮನಾಥ ಎಚ್. ಹೊಸಮನಿ ನೇತೃತ್ವದ ವಿಶೇಷ ತಂಡವು ಇಂದು ಕಾರ್ಯಾಚರಣೆ ನಡೆಸಿ, ಲಂಚದ ಹಣ ಪಡೆಯುತ್ತಿದ್ದ ಅಧಿಕಾರಿಯನ್ನು ರೆಡ್‌ಹ್ಯಾಂಡ್ ಆಗಿ ಬಂಧಿಸಿದೆ. ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಸದ್ಯ ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ.
