ಬಾಗಲಕೋಟೆ ಜಿಲ್ಲೆಯ ತೇರದಾಳ ಪಟ್ಟಣದ ದಾಸರಮಡ್ಡಿಯಲ್ಲಿ ತಗಡಿನ ಶೆಡ್ ಮನೆ ಮೇಲೆ ಹೈಟೆನ್ಶನ್ ವಿದ್ಯುತ್ ತಂತಿ ಹರಿದು ಬಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.

ತಗಡಿನ ಶೆಡ್ ಮನೆ ಮೇಲೆ ಹೈಟೆನ್ಶನ್ ವಿದ್ಯುತ್ ತಂತಿ ಹರಿದು ಬಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬಾಗಲಕೋಟೆ ಜಿಲ್ಲೆಯ ತೇರದಾಳ(Terdal) ಪಟ್ಟಣದ ದಾಸರಮಡ್ಡಿಯಲ್ಲಿ ನಡೆದಿದೆ. ಸಂತೋಷ ಸುಣಗಾರ(22), ಮತ್ತು ಸಂತೋಷ್ ಅತ್ತೆ ಶೋಭಾ ಹುಲ್ಲೆಣ್ಣವರ (32) ಮೃತರು. ಇನ್ನುಳಿದಂತೆ ಶ್ರೀಕಾಂತ್ , ಮಹೇಶ್, ಕಸ್ತೂರಿ ಹಾಗೂ ಸಂಗೀತಾ ಕಾಮಶೆಟ್ಟಿ ಸೇರಿ ನಾಲ್ವರಿಗೆ ಗಾಯವಾಗಿದ್ದು, ಸ್ಥಳೀಯ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ

ದಾಸರಮಡ್ಡಿಯಲ್ಲಿ ದುರ್ಗಾದೇವಿ ಜಾತ್ರೆಯಿತ್ತು. ಜಾತ್ರೆಗೆ ಎಲ್ಲರೂ ಮನೆಯಲ್ಲಿ ಸೇರಿದ್ದರು. ಜೊತೆಗೆ ಮೃತ ಸಂತೋಷ್ ಹಾಗೂ ಗಾಯಗೊಂಡ ಸಂಗೀತಾ ನಡುವೆ ಎಂಗೇಜ್ ಮೆಂಟ್ ಆಗಿದ್ದು, ಇದೇ ಜೂನ್ 28 ರಂದು ಮದುವೆಯಾಗಲಿದ್ದರು. ಆದರೆ, ಇದೀಗ ಈ ಅವಘಡ ಸಂಭವಿಸಿದ್ದು, ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಸ್ಥಳಕ್ಕೆ ತೇರದಾಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಘಟನೆ ವಿಷಯ ತಿಳಿದು, ಸ್ಥಳಕ್ಕೆ ಬಾಗಲಕೋಟೆ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪುರ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಅನೇಕ ಬಾರಿ ವಿದ್ಯುತ್ ತಂತಿ ಬದಲಿಸುವಂತೆ ಮನವಿ ಮಾಡಿದರೂ ಕೇರ್ ಮಾಡಿಲ್ಲ ಅಂತ ಹೇಳಿದಿರಿ. ನಿರ್ಲಕ್ಷ್ಯ ತೋರಿದ ಹೆಸ್ಕಾಂ ಸಿಬ್ಬಂದಿ ಮೇಲೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
