ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಜನಸಾಮಾನ್ಯರ ಜೀವದ ಜೊತೆ ಚೆಲ್ಲಾಟವಾಡಲಾಗುತ್ತಿದೆಯೇ ಎಂಬ ಅನುಮಾನ ಮೂಡಿದೆ. ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡದೆ, ಔಷಧಿಗಳೂ ಇಲ್ಲದೆ ಸಿಬ್ಬಂದಿ ಬೇಜವಾಬ್ದಾರಿತನ ಪ್ರದರ್ಶಿಸುತ್ತಿರುವ ಗಂಭೀರ ಆರೋಪ ಕೇಳಿಬಂದಿದೆ.

ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆಸ್ಪತ್ರೆಗೆ ಚಿಕಿತ್ಸೆಗಾಗಿ ದೂರದ ಹಳ್ಳಿಗಳಿಂದ ನೂರಾರು ಬಡ ರೋಗಿಗಳು ಆಗಮಿಸುತ್ತಿದ್ದರೂ, ಅವರಿಗೆ ಸೂಕ್ತ ಸ್ಪಂದನೆ ಸಿಗುತ್ತಿಲ್ಲ. ಬೆಳಗಿನ ಜಾವದಿಂದಲೇ ಸಾಲಿನಲ್ಲಿ ನಿಂತು ಕಾದು ಕುಳಿತರೂ ವೈದ್ಯರು ಮತ್ತು ಸಿಬ್ಬಂದಿ ರೋಗಿಗಳನ್ನು ಪರೀಕ್ಷಿಸಲು ನಿರ್ಲಕ್ಷ್ಯ ಹಾಗೂ ತಾತ್ಸಾರ ಮನೋಭಾವ ತೋರುತ್ತಿದ್ದಾರೆ ಎಂದು ರೋಗಿಗಳ ಪೋಷಕರು ನೇರವಾಗಿಯೇ ಆರೋಪಿಸಿದ್ದಾರೆ.

ಮತ್ತೊಂದೆಡೆ, ಆಸ್ಪತ್ರೆಯಲ್ಲಿ ಅಗತ್ಯ ಔಷಧಿಗಳ ತೀವ್ರ ಕೊರತೆ ಎದುರಾಗಿದೆ ಎಂಬ ದೂರುಗಳು ಕೇಳಿಬಂದಿವೆ. ಚಿಕಿತ್ಸೆ ನೀಡುವ ಬದಲು “ಆಸ್ಪತ್ರೆಯಲ್ಲಿ ಸ್ಟಾಕ್ ಖಾಲಿಯಾಗಿದೆ, ಹೊರಗಡೆ ಕೊಂಡುಕೊಳ್ಳಿ” ಎಂದು ಹೇಳಿ ರೋಗಿಗಳನ್ನು ವಾಪಸ್ ಕಳುಹಿಸಲಾಗುತ್ತಿದೆ. ವೈದ್ಯರ ಈ ಬೇಜವಾಬ್ದಾರಿ ನಡೆ ಮತ್ತು ಆಸ್ಪತ್ರೆಯ ಈ ವ್ಯವಸ್ಥೆಯ ವಿರುದ್ಧ ರೋಗಿಗಳು ಹಾಗೂ ಅವರ ಕುಟುಂಬದವರು ಸ್ಥಳದಲ್ಲೇ ಹಿಡಿಶಾಪ ಹಾಕುತ್ತಿದ್ದು, ಕೂಡಲೇ ಹಿರಿಯ ಅಧಿಕಾರಿಗಳು ಮಧ್ಯಪ್ರವೇಶಿಸಿ ಬಡವರ ನೆರವಿಗೆ ಧಾವಿಸಬೇಕೆಂದು ಆಗ್ರಹಿಸಿದ್ದಾರೆ.
