ನಿಪ್ಪಾಣಿಯ ಆಶ್ರಯ ಮನೆ ಹಂಚಿಕೆ ಪ್ರಕ್ರಿಯೆಯಲ್ಲಿ ನಡೆದ ಗಲಾಟೆಗೆ ಶಾಸಕಿ ಶಶಿಕಲಾ ಜೊಲ್ಲೆ ಅವರ ಅಹಂಭಾವ ಮತ್ತು ಸ್ವಪ್ರತಿಷ್ಠೆಯೇ ನೇರ ಕಾರಣ ಎಂದು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ) ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ನೇರ ಆರೋಪ ಮಾಡಿದ್ದಾರೆ. ಹಣ ಪಾವತಿಸಿದ ಬಡ ಫಲಾನುಭವಿಗಳನ್ನು ಕೈಬಿಟ್ಟು ಅನ್ಯಾಯ ಮಾಡಲು ಹೊರಟಿರುವುದನ್ನು ತಾವೂ ಸೇರಿದಂತೆ ಕಾಂಗ್ರೆಸ್ ನಾಯಕರು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ನಿಪ್ಪಾಣಿಯ ದಾಯಿಂಗಡೆ ಮಳಾದಲ್ಲಿ ನಡೆದ ಜಿ+2 ಆಶ್ರಯ ಮನೆಗಳ ಲಾಟರಿ ಹಂಚಿಕೆ ಸಭೆಯಲ್ಲಿ ಶಾಸಕಿ ಶಶಿಕಲಾ ಜೊಲ್ಲೆ ಅವರ ನಡೆಗೆ ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ನಿನ್ನೆ ನಡೆದ ಹೈಡ್ರಾಮಾಕ್ಕೆ ಪೂರ್ಣ ಪ್ರಮಾಣದಲ್ಲಿ ನಿಷ್ಕ್ರಿಯರಾದ ಶಾಸಕರೇ ಕಾರಣ ಎಂದು ಖಂಡಿಸಿರುವ ಅವರು, “ಕ್ಷೇತ್ರದಲ್ಲಿ ಬಡವರಿಗಾಗಿ ಸುಮಾರು 800 ಮನೆಗಳು ಮಂಜೂರಾಗಿದ್ದರೂ, ಕೇವಲ 600 ಜನರಿಗೆ ಮಾತ್ರ ಲಾಟರಿ ಎತ್ತುತ್ತೇವೆ ಎಂದು ಶಾಸಕರು ಹಠ ಹಿಡಿದಿದ್ದರ ಹಿಂದೆ ಸ್ವಪ್ರತಿಷ್ಠೆಯ ಅಜೆಂಡಾ ಅಡಗಿದೆ. ಅಧಿಕಾರಿಗಳ ಸಮ್ಮುಖದಲ್ಲೇ ಕಣ್ಣೀರು ಸುರಿಸಿ ತಮ್ಮ ಅಸಮರ್ಥತೆಯನ್ನು ಪ್ರದರ್ಶಿಸಿರುವ ಶಾಸಕರು, ಬಡವರ ಹಕ್ಕನ್ನು ಕಸಿದುಕೊಳ್ಳಲು ನೋಡುತ್ತಿದ್ದಾರೆ” ಎಂದು ಲೇವಡಿ ಮಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಲಕ್ಷ್ಮಣರಾವ್ ಚಿಂಗಳೆ, 2018 ರಲ್ಲಿಯೇ ಮಾಜಿ ಶಾಸಕ ಕಾಕಾಸಾಹೇಬ್ ಪಾಟೀಲ್ ಅವರ ಅವಧಿಯಲ್ಲಿ ಅರ್ಹ ಫಲಾನುಭವಿಗಳ ಪಟ್ಟಿಯನ್ನು ತಯಾರಿಸಲಾಗಿತ್ತು. ಆದರೆ ಈಗಿನ ಶಾಸಕರು ತಮಗೆ ಬೇಕಾದ ರೀತಿಯಲ್ಲಿ 600 ಜನರ ಸದೋಷ ಪಟ್ಟಿಯನ್ನು ಸಿದ್ಧಪಡಿಸಿಕೊಂಡು ಬಂದಿದ್ದಾರೆ. ಆಶ್ರಯ ಮನೆಗಾಗಿ ಈಗಾಗಲೇ 4 ಕಂತುಗಳ ಹಣ ತುಂಬಿರುವ ಸುಮಾರು 50 ರಿಂದ 60 ಬಡ ಜನರ ಹೆಸರುಗಳನ್ನೇ ಈ ಪಟ್ಟಿಯಿಂದ ಕೈಬಿಡಲಾಗಿದೆ. ಪಿಎಂ ಆವಾಸ ಯೋಜನೆಯಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅನುದಾನ ಲಭ್ಯವಿದ್ದರೂ, ನಿಯಮಬಾಹಿರವಾಗಿ ನಡೆದುಕೊಳ್ಳಲಾಗುತ್ತಿದೆ. ಆಶ್ರಯ ಸಮಿತಿಯ ಸುಪ್ರೀಂ ನಾನೇ ಎಂದು ಬೀಗುತ್ತಿರುವ ಶಾಸಕರು ತಕ್ಷಣವೇ ಈ ದೋಷಪೂರಿತ ಪಟ್ಟಿಯನ್ನು ಸರಿಪಡಿಸಬೇಕು. ಅಲ್ಲಿಯವರೆಗೆ ಮನೆ ವಂಚಿತ ಬಡವರ ಪರವಾಗಿ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಚಿಂಗಳೆ ಎಚ್ಚರಿಕೆ ನೀಡಿದ್ದಾರೆ.
