ಬೆಳಗಾವಿಯ ಶಿವಂ ಅಸೋಸಿಯೇಟ್ಸ್ ಬಹುಕೋಟಿ ವಂಚನೆ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸಾರ್ವಜನಿಕರ ಹಣ ಲೂಟಿ ಮಾಡಿದ ಆರೋಪಿಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಕರವೇ ಜಿಲ್ಲಾಧ್ಯಕ್ಷನಿಗೆ ಸಿಐಡಿ ಅಧಿಕಾರಿಗಳು ಬಿಗಿಪಾಶ ಹಾಕಿದ್ದಾರೆ. ನೋಟಿಸ್ಗೆ ಕ್ಯಾರೆ ಎನ್ನದ ಅಧ್ಯಕ್ಷನ ಬಂಧನಕ್ಕೆ ಈಗ ತನಿಖಾ ಕೌಂಟ್ಡೌನ್ ಆರಂಭವಾಗಿದೆ.

ಬೆಳಗಾವಿಯ ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣವರ ನಡೆಸಿರುವ ಬಹುಕೋಟಿ ವಂಚನೆ ಪ್ರಕರಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಜಿಲ್ಲಾಧ್ಯಕ್ಷ ಅಭಿಲಾಷ್ ಹೆಸರು ಬಲವಾಗಿ ತಳುಕುಹಾಕಿಕೊಂಡಿದೆ. ಸಾರ್ವಜನಿಕರು ಹೂಡಿಕೆ ಮಾಡಿದ್ದ ಕೋಟ್ಯಂತರ ರೂಪಾಯಿ ಹಣವನ್ನು ಆರೋಪಿ ಶಿವಾನಂದ ತನಗೆ ಇಷ್ಟಬಂದಂತೆ ದುರುಪಯೋಗಪಡಿಸಿಕೊಂಡಿದ್ದು, ಇದೀಗ ಸಿಐಡಿ ತನಿಖೆಯಿಂದ ಸ್ಫೋಟಕ ಸತ್ಯಗಳು ಹೊರಬರುತ್ತಿವೆ. ಬೆಳಗಾವಿ ಕನ್ನಡ ಹಬ್ಬ ಯಶಸ್ವಿಯಾದ ಹಿನ್ನೆಲೆಯಲ್ಲಿ ಆರೋಪಿ ಶಿವಾನಂದ, ಕರವೇ ಜಿಲ್ಲಾಧ್ಯಕ್ಷ ಅಭಿಲಾಷ್ಗೆ ಬರೋಬ್ಬರಿ ಒಂದೂವರೆ ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಕಾರನ್ನು ಉಡುಗೊರೆಯಾಗಿ ನೀಡಿದ್ದ ಎನ್ನಲಾಗಿದೆ. ಅಷ್ಟೇ ಅಲ್ಲದೆ, ಅಭಿಲಾಷ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಸಿನಿಮಾಗೂ ಇದೇ ಸಾರ್ವಜನಿಕರ ವಂಚನೆಯ ಹಣವನ್ನೇ ಹೂಡಿಕೆ ಮಾಡಿರುವುದಾಗಿ ಸ್ವತಃ ಆರೋಪಿ ಶಿವಾನಂದ ಸಿಐಡಿ ಮುಂದೆ ಬಾಯಿಬಿಟ್ಟಿದ್ದಾನೆ.

ಈ ಅಕ್ರಮ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಕರವೇ ಜಿಲ್ಲಾಧ್ಯಕ್ಷ ಅಭಿಲಾಷ್ಗೆ ಸಿಐಡಿ ಅಧಿಕಾರಿಗಳು ಈಗಾಗಲೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ. ಆದರೆ, ನೋಟಿಸ್ ಕೈಸೇರಿದರೂ ಅಭಿಲಾಷ್ ತನಿಖೆಗೆ ಸಕಾರಾತ್ಮಕವಾಗಿ ಸ್ಪಂದಿಸದೆ ಕಾಲಹರಣ ಮಾಡುತ್ತಿರುವುದು ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಸದ್ಯ ವಿಚಾರಣೆಗೆ ಗೈರುಹಾಜರಾಗಿ ತಲೆಮರೆಸಿಕೊಳ್ಳಲು ಯತ್ನಿಸುತ್ತಿರುವ ಅಭಿಲಾಷ್ನನ್ನು ಯಾವುದೇ ಕ್ಷಣದಲ್ಲಾದರೂ ವಶಕ್ಕೆ ಪಡೆದು ಬಂಧಿಸಲು ಸಿಐಡಿ ಅಧಿಕಾರಿಗಳ ವಿಶೇಷ ತಂಡ ಭರ್ಜರಿ ಸಿದ್ಧತೆ ನಡೆಸಿದೆ. ಸಾರ್ವಜನಿಕರ ಹಣದಲ್ಲಿ ಐಷಾರಾಮಿ ಜೀವನ ನಡೆಸಿದವರ ಹೆಡೆಮುರಿ ಕಟ್ಟಲು ಕಾನೂನು ಹಿರಿದು ನಿಂತಿದೆ.
