Belagavi

ಬಿಜೆಪಿಗೆ ‘ಮುಸ್ಲಿಂ-ಪಾಕಿಸ್ತಾನ’ ಪದಗಳೇ ಬಂಡವಾಳ, ನೀಟ್ ಹಗರಣದಲ್ಲಿ ಕೇಂದ್ರದ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ: ಸಚಿವ ಸತೀಶ್ ಜಾರಕಿಹೊಳಿ ವಾಗ್ದಾಳಿ!

Share

ಮುಸ್ಲಿಂ ಮುಖಂಡರ ಮೇಲಿನ ಕೇಸ್ ವಾಪಸ್, ನೀಟ್ ಹಗರಣ ಹಾಗೂ ರಾಜ್ಯ ರಾಜಕೀಯದ ಸಚಿವ ಸಂಪುಟ ವಿಸ್ತರಣೆಯ ಕುರಿತು ಅವರು ಹಲವು ಮಹತ್ವದ ಸತ್ಯಗಳನ್ನು ಚಿತ್ರದುರ್ಗದಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಬಿಚ್ಚಿಟ್ಟಿದ್ದಾರೆ.

ರಾಜ್ಯದಲ್ಲಿ ಮುಸ್ಲಿಂ ನಾಯಕರ ಮೇಲಿನ ಪ್ರಕರಣಗಳನ್ನು ಹಿಂಪಡೆಯುವ ವಿಷಯದ ಕುರಿತು ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳಿ, “ಸರ್ಕಾರದ ಮುಂದೆ ಮುಸ್ಲಿಮರು, ರೈತರು, ಕನ್ನಡ ಪರ ಹೋರಾಟಗಾರರು ಸೇರಿದಂತೆ ಸುಮಾರು 50 ರಿಂದ 60 ಪ್ರಕರಣಗಳಿವೆ. ಆದರೆ ಬಿಜೆಪಿ ನಾಯಕರಿಗೆ ಕೇವಲ ‘ಮುಸ್ಲಿಂ’ ಮತ್ತು ‘ಪಾಕಿಸ್ತಾನ’ ಎಂಬ ಪದಗಳನ್ನು ಬಳಸುವುದಷ್ಟೇ ಗೊತ್ತು. ಈ ಪದಗಳನ್ನು ಕೇಳಿದರೆ ಜನ ಆಕರ್ಷಿತರಾಗುತ್ತಾರೆ ಎಂಬುದು ಅವರ ಭ್ರಮೆ, ಇದು ಬಿಜೆಪಿಯ ಎಂದಿನ ರಾಜಕೀಯ ಸ್ಟಂಟ್” ಎಂದು ಕಿಡಿಕಾರಿದರು.

ಇದೇ ವೇಳೆ ದೇಶಾದ್ಯಂತ ಸದ್ದು ಮಾಡುತ್ತಿರುವ ‘ನೀಟ್’ ಪರೀಕ್ಷಾ ಅಕ್ರಮದ ಕುರಿತು ಮಾತನಾಡಿದ ಅವರು, ಈ ಹಗರಣದ ಹಿಂದೆ ಕೇಂದ್ರ ಸರ್ಕಾರದ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ. ಕೇಂದ್ರ ಶಿಕ್ಷಣ ಸಚಿವರು ಈ ವಿಷಯದ ಬಗ್ಗೆ ಕನಿಷ್ಠ ಕಾಳಜಿಯನ್ನೂ ತೋರಿಸುತ್ತಿಲ್ಲ, ಮಾಧ್ಯಮಗಳ ಮುಂದೆ ಬಂದು ಉತ್ತರಿಸುವ ಧೈರ್ಯ ಅವರಿಗಿಲ್ಲ ಎಂದು ದೂರಿದರು. ಇನ್ನು ಶಾಲೆಗಳಲ್ಲಿ ನಡೆಯುತ್ತಿರುವ ಕೇಸರಿ ಅಭಿಯಾನದ ಕುರಿತು ಮಾತನಾಡಿದ ಸಚಿವರು, “ಬಿಜೆಪಿಯವರು ನಮ್ಮ ಬಾಲ್ಯದಿಂದಲೂ ಇಂತಹ ಕೇಸರಿ ಅಭಿಯಾನ ಮಾಡುತ್ತಿದ್ದಾರೆ, ಇದರಲ್ಲಿ ಹೊಸದೇನೂ ಇಲ್ಲ. ದೇಶದಲ್ಲಿ ಎಡ ಮತ್ತು ಬಲ ಎಂಬ ವಿಭಿನ್ನ ಸಿದ್ಧಾಂತಗಳಿವೆ, ಯಾರಿಗೆ ಯಾವ ಸಿದ್ಧಾಂತ ಬೇಕೋ ಅದನ್ನು ಅವರು ಆಯ್ಕೆ ಮಾಡಿಕೊಳ್ಳುತ್ತಾರೆ. ನಮ್ಮ ಸಿದ್ಧಾಂತದ ಬಗ್ಗೆ ನಾವು ಮಾತನಾಡುತ್ತೇವೆ” ಎಂದರು.

 

ಇದೇ ವೇಳೆ ರಾಜ್ಯ ಕಾಂಗ್ರೆಸ್‌ನಲ್ಲಿ ಚರ್ಚೆಯಾಗುತ್ತಿರುವ ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿ ಹಾಗೂ ಸಚಿವ ಸಂಪುಟ ವಿಸ್ತರಣೆಯ ಕುರಿತು ಪ್ರತಿಕ್ರಿಯಿಸಿ, “ದೆಹಲಿ ಮಟ್ಟದಲ್ಲಿ ಏನು ಚರ್ಚೆಯಾಗುತ್ತಿದೆ ಎಂದು ನಮಗೆ ಇನ್ನು ತಿಳಿದಿಲ್ಲ. ಎಷ್ಟು ಸಚಿವರನ್ನು ಬದಲಾಯಿಸುತ್ತಾರೆ ಅಥವಾ ಯಾವಾಗ ವಿಸ್ತರಣೆ ಮಾಡುತ್ತಾರೆ ಎಂಬ ಸಂಪೂರ್ಣ ನಿರ್ಧಾರವನ್ನು ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಳ್ಳಲಿದ್ದು, ಅಲ್ಲಿಯವರೆಗೆ ನಾವೆಲ್ಲರೂ ಕಾದು ನೋಡಬೇಕಿದೆ” ಎಂದು ಸ್ಪಷ್ಟಪಡಿಸಿದರು.

 

Tags:

error: Content is protected !!