Crime

ಜಮೀನು ವಿವಾದಕ್ಕೆ ಲಾಂಗು, ಮಚ್ಚು ಹಿಡಿದು ಭೀಕರ ಮಾರಾಮಾರಿ!!!

Share

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಭೀಕರ ರಕ್ತಪಾತ ನಡೆದಿದೆ. ಲಾಂಗು, ಮಚ್ಚು ಹಾಗೂ ದೊಣ್ಣೆಗಳನ್ನು ಹಿಡಿದು ಏಕಾಏಕಿ ಹಲ್ಲೆ ನಡೆಸಲಾಗಿದ್ದು, ಘಟನೆಯಲ್ಲಿ ಮಹಿಳೆಯರು ಸೇರಿದಂತೆ ಒಟ್ಟು 9 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಿಪನಾಳ ಗ್ರಾಮದ ಬಿಲಕಾರ ತೋಟದಲ್ಲಿ ಜಮೀನಿನ ಹಕ್ಕಿಗಾಗಿ ನಡೆದ ಗಲಾಟೆ ತಾರಕಕ್ಕೇರಿ ಮಾರಾಮಾರಿಯಾಗಿ ಮಾರ್ಪಟ್ಟಿದೆ. ಸತ್ತೇಪ್ಪ ಲಕ್ಷ್ಮಣ ಬಿಲಕಾರ ಅವರಿಗೆ ಸೇರಿದ ಜಮೀನನ್ನು ಭರಮಪ್ಪ ಹನಮಂತ ಹರಿಜನ ಹಾಗೂ ಲಕ್ಷ್ಮೀಬಾಯಿ ಹರಿಜನ ದಂಪತಿಗಳು ಉಳುಮೆ ಮಾಡುತ್ತಾ, ಅದರಲ್ಲಿ ಅರಶಿನ ಬೆಳೆ ಬೆಳೆದಿದ್ದರು. ಆದರೆ, “ತಕ್ಷಣವೇ ಹೊಲ ಬಿಟ್ಟು ತೊಲಗಿ” ಎಂದು ಏಕಾಏಕಿ ನುಗ್ಗಿದ ದುಷ್ಕರ್ಮಿಗಳ ಗುಂಪು, ದಂಪತಿಗಳ ಮೇಲೆ ಕಲ್ಲು, ದೊಣ್ಣೆ ಹಾಗೂ ಮಚ್ಚುಗಳಿಂದ ಭೀಕರವಾಗಿ ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ. ಬಸವರಾಜ ಮರ್ದಿ, ವಿವೇಕಾನಂದ, ಯಮನಪ್ಪ ಸೇರಿದಂತೆ ಸುಮಾರು 8 ಜನರ ತಂಡ ಈ ಕೃತ್ಯ ಎಸಗಿದೆ ಎನ್ನಲಾಗಿದೆ.

ಈ ರಕ್ತಸಿಕ್ತ ಘಟನೆಯಲ್ಲಿ ನಾಗಪ್ಪ ಬಿಲಕಾರ, ಸುನಂದಾ, ಹೊಳೆವ್ವಾ, ರಾಮಪ್ಪ, ಸಂಜು ಹಾಗೂ ಮಾರುತಿ ಬಿಲಕಾರ ಸೇರಿದಂತೆ ಒಟ್ಟು 9 ಜನರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಗಾಯಾಳುಗಳನ್ನು ತಕ್ಷಣವೇ ಗೋಕಾಕಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜಮೀನಿಗಾಗಿ ಹೆಂಗಸರು, ಮಕ್ಕಳನ್ನದೇ ಮನಸೋಇಚ್ಛೆ ತಳಿಸುತ್ತಿರುವ ದೃಶ್ಯಗಳು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ನೋಡುವವರ ಎದೆ ನಡುಗಿಸುವಂತಿದೆ. ಸದ್ಯ ರಾಯಬಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Tags:

error: Content is protected !!