ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿದ್ದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ವಿವಾದಾತ್ಮಕ ಫೋಟೋ ಪ್ರಕರಣದ ಪ್ರಮುಖ ಕೊಂಡಿ, ನಟೋರಿಯಸ್ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ ಕೊನೆಗೂ ಜೈಲಿನಿಂದ ಬಿಡುಗಡೆಯಾಗಿದ್ದಾನೆ. ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿದ್ದ ಈತನಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಹಲವಾರು ಗಂಭೀರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಜೈಲು ಸೇರಿದ್ದ ಕುಖ್ಯಾತ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗರಾಜ್ ಅಲಿಯಾಸ್ ನಾಗ ಸದ್ಯ ಬೆಳಗಾವಿಯ ಹಿಂಡಲಗಾ ಜೈಲಿನಿಂದ ಬಿಡುಗಡೆಯಾಗಿದ್ದಾನೆ. ಸಿದ್ದಾಪುರದ ಮಹೇಶ್ ಕೊಲೆ ಪ್ರಕರಣದಲ್ಲಿ ಈತನನ್ನು ಬಂಧಿಸಲಾಗಿತ್ತು. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗ ನಟ ದರ್ಶನ್ ಜೊತೆಗೆ ಕುಳಿತು ಟೀ ಹಾಗೂ ಸಿಗರೇಟ್ ಸೇವಿಸುತ್ತಿದ್ದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ರಾಜ್ಯಾದ್ಯಂತ ಭಾರೀ ವಿವಾದ ಸೃಷ್ಟಿಸಿತ್ತು.

ಈ ಜೈಲು ನಿಯಮ ಉಲ್ಲಂಘನೆ ಪ್ರಕರಣದ ಬೆನ್ನಲ್ಲೇ ಆಡಳಿತಾತ್ಮಕ ಕಾರಣಗಳಿಗಾಗಿ ನಾಗನನ್ನು ಬೆಳಗಾವಿಯ ಹಿಂಡಲಗಾ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಸದ್ಯ ಹೈಕೋರ್ಟ್ನಿಂದ ಜಾಮೀನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರುವ ಈತ ಜೈಲಿನಿಂದ ಹೊರಬಂದಿದ್ದಾನೆ.
